ರಾಮನಡಿಯಿಟ್ಟ ನೆಲ, ಭೀಮನುಸುರಿದ ಗಾಳಿ|
ವ್ಯೋಮದೆ ಭಗೀರಥಂ ತಂದ ಸುರತಟನಿ||
ಸೋಮನಂ ಪೆತ್ತ ಕಡಲೀ ಪುರತಾನಗಳಿರೆ|
ನಾವೆಂತು ಹೊಸಬರೆಲೊ-ಮಂಕುತಿಮ್ಮ||
ಈ ಭೂಮಿ ಎನ್ನುವುದು ಶ್ರೀರಾಮನು ಪಾದವಿಟ್ಟಂತಹ ಪವಿತ್ರವಾದ ಭೂಮಿಯಿದು. ಇಲ್ಲಿ ಬೀಸುವ ಗಾಳಿ ಭೀಮನು ಉಸಿರಾಡಿದ್ದು. ಇಂದು ಇಲ್ಲಿ ಹರಿಯುತ್ತಿರುವ ಪುಣ್ಯ ನದಿ ಗಂಗೆಯನ್ನು ಅಂದು ಭಗೀರಥ ದೇವಲೋಕದಿಂದ ತಂದಿರುವುದು. ಆಕಾಶದಲ್ಲಿ ಬೆಳಗುವ ಚಂದ್ರ ಬಹಳ ಹಿಂದೆ ಕಡಲಿನಿಂದ ಜನಿಸಿರುವುದು. ಈ ಎಲ್ಲಾ ಹಳತುಗಳು ಇರುವುದರಿಂದ ನಾವು ಹೇಗೆ ಹೊಸಬರಾಗಲು ಸಾಧ್ಯ? ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಪ್ರಶ್ನಿಸಿದ್ದಾರೆ.
ಇಂದು ತಂತ್ರಜ್ಞಾನದ ಯುಗದಲ್ಲಿರುವವರಿಗೆ ಹಳತು ಎಂದರೆ ಪ್ರಯೋಜನವಿಲ್ಲದ್ದು ಎಂಬ ಒಂದು ರೀತಿಯ ತತ್ಸಾರ ಭಾವನೆ ಇದೆ. ಈ ಭೂಮಿ ಹಳತು ಆದರೆ ಅದಿಲ್ಲದೆ ನಮಗೆ ನೆಲೆಯೆ ಇಲ್ಲ. ನಾವು ಉಸಿರಾಡುವ ಗಾಳಿ ಬಹಳ ಹಿಂದೆ ಭೀಮನು ಉಸಿರಾಡಿದ್ದು. ಆದರೆ ಅದಿಲ್ಲದೆ ನಮಗೆ ಜೀವವಿಲ್ಲ. ಹಳೆಯ ಗಂಗೆಯು ಇಂದಿಗೂ ಜನಜೀವನಕ್ಕೆ ಆಸರೆಯಾಗಿದ್ದಾಳೆ. ಹಳೆಯದಾದ ಚಂದ್ರನು ಇಲ್ಲದೆ ನಮಗೆ ಬೆಳದಿಂಗಳಿಲ್ಲ. ಹೀಗೆ ಈ ಹಳತರಲ್ಲೆ ನಮ್ಮ ನವ್ಯ ಜೀವನದ ಶಕ್ತಿ ಅಡಗಿರುವುದು. ಈ ಹಳತರಿಂದಲೇ ಬದುಕನ್ನು ಕಟ್ಟಿಕೊಳ್ಳುವ ನಾವು ಹೇಗೆ ಹೊಸಬರಾಗಲು ಸಾಧ್ಯ?
ನಮ್ಮ ಕಲೆ,ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನೆಲ್ಲಾ ಹಳತು ಎಂದು ತಿರಸ್ಕರಿಸಿದರೆ ಬದುಕಿನ ಸಾರವನ್ನೇ ಕಳೆದುಕೊಂಡಂತೆ ಅಲ್ಲವೆ? ಈ ಹಳತರಲ್ಲಿಯೆ ಜೀವನದ ಹೊಸತನ ಇರುವುದು.
ಗಡಿಗೆ ಒಡೆಯಿತು ಎಂದು ತಲೆ ಮೇಲೆ ಕೈಹೊತ್ತು|
ಚಿಂತಿಸುತ ಕುಳಿತರದು ಬಾಳಕಲೆಯಲ್ಲ||
ಇದೆ ಮಣ್ಣು, ಇದೆ ನೀರು; ಕಲಸಿ ತಿರುಗಿಸು ಚಕ್ರ|
ಕೊಡು ಹೊಸತು ಆಕಾರ – ಮುದ್ದುರಾಮ||
ಎಂಬ ಕವಿ ಕೆ. ಶಿವಪ್ಪನವರ ನುಡಿಯಂತೆ ಹಳೆ ನೀರು ಹಳೆ ಮಣ್ಣನ್ನು ಕಲಸಿ ಹೊಸ ಮಡಕೆಯನ್ನು ಮಾಡುವಂತೆ ಹೊಸ ಯೋಚನೆ ಚಿಂಚನೆಗಳೊಂದಿಗೆ ಬದುಕಿನಲ್ಲಿ ಹೊಸತನವನ್ನು ಕಾಣುವ ಪ್ರಯತ್ನ ಮಾಡಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು ಕಸಾಪ ಕಾರ್ಕಳ ಘಟಕ