ಧಾರ್ಮಿಕ ವಿಧಿವಿಧಾನ ನೆರವೇರಿಸಿ ಅಶ್ವತ್ಥ ಮರ ಪೂರ್ಣ ತೆರವು
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದ ಪುಷ್ಕರಿಣಿ ಬಳಿಯಿರುವ ಅಶ್ವತ್ಥ ಮರದ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.



ಸುಮಾರು 100 ವರ್ಷ ಮೇಲ್ಪಟ್ಟ ಅಶ್ವತ್ಥ ಮರ ಇದಾಗಿದ್ದು, ಧಾರ್ಮಿಕ ಮಹತ್ವ ಹೊಂದಿತ್ತು. ಪ್ರತಿದಿನ ನೂರಾರು ಮಂದಿ ಭಕ್ತರು ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕುವ ದೃಶ್ಯ ಕಂಡುಬರುತ್ತಿತ್ತು. ಮಹಾಲಿಂಗೇಶ್ವರ ದೇವರ ಜಾತ್ರೆಯ ನಂತರ ಈ ಅಶ್ವತ್ಥ ಮರದ ಇನ್ನೊಂದು ಭಾಗದಲ್ಲಿ ಕ್ಷೇತ್ರದ ಕಾರಣಿಕ ದೈವ ಅಂಙಣತ್ತಾಯ ಸ್ವಾಮಿಯ ನೇಮ ನಡೆಯುತ್ತದೆ.
ಭಾನುವಾರು ತಡರಾತ್ರಿ 11 ಗಂಟೆಗೆ ಬೃಹತ್ ಅಶ್ವತ್ಥ ಮರದ ಮುಖ್ಯ ರೆಂಬೆ ಧರಾಶಾಹಿಯಾಗಿತ್ತು. ಸೋಮವಾರ ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ್ದು, ನಂತರ ಮರದ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.
ಪೂರ್ಣ ಮರ ತೆರವು:
ಅಶ್ವತ್ಥ ಮರದ ಮುಖ್ಯ ರೆಂಬೆ ಯಾರಿಗೂ ಯಾವುದೇ ಹಾನಿ ಎಸಗದೇ ಧರಾಶಾಹಿಯಾಗಿದೆ. ಮರದ ಇನ್ನೊಂದು ರೆಂಬೆ ಹಾಗೆಯೇ ಉಳಿದುಕೊಂಡಿದೆ. ಆದರೆ ಇದು ಕೂಡ ಸದ್ಯದಲ್ಲೇ ಬೀಳುವ ಸ್ಥಿತಿಯಲ್ಲಿ ಇರುವುದರಿಂದ, ಆ ಮರವನ್ನು ತೆರವು ಮಾಡಲಾಗುವುದು ಎಂದು ಹೇಳಲಾಗಿದೆ.