ಕುಕ್ಕರ್‌ ಸ್ಫೋಟದ ಗಾಯಾಳು ಪುರುಷೋತ್ತಮ ಪೂಜಾರಿಯವರಿಗೆ ಇನ್ನೂ ಸಿಕ್ಕಿಲ್ಲ ಸರಕಾರದ ನೆರವು

ಚಿಕಿತ್ಸೆ ವೆಚ್ಚ ಭರವಸೆ ಹುಸಿ; ಆದಾಯ ಮೂಲವಿಲ್ಲದೆ ಕುಟುಂಬ ಸಂಕಷ್ಟದಲ್ಲಿ

ಮಂಗಳೂರು : ಮಂಗಳೂರು ಕುಕ್ಕರ್ ಬ್ಲಾಸ್ಟ್‌ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರ ಚಿಕಿತ್ಸೆಯ ವೆಚ್ಚ ಗಗನ ಮುಟ್ಟಿದೆ. ಆದರೆ ಸರಕಾರದಿಂದ ಅವರಿಗೆ ಇನ್ನೂ ಚಿಕ್ಕಾಸಿನ ನೆರವು ಸಿಕ್ಕಿಲ್ಲ. ಚಿಕಿತ್ಸೆ ವೆಚ್ಚ ಭರಿಸುವ ಸರಕಾರದ ಭರವಸೆ ಹುಸಿಯಾಗಿದೆ. ಒಂದೆಡೆ ಬಾಂಬ್‌ ಬ್ಲಾಸ್ಟ್‌ ಮಾಡಿದ ಉಗ್ರ ಮಹಮ್ಮದ್‌ ಶಾರಿಕ್‌ಗೆ ಸರಕಾರದ ವೆಚ್ಚದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ತನ್ನದಲ್ಲದ ತಪ್ಪಿನಿಂದ ಗಾಯಗೊಂಡಿರುವ ಪುರುಷೋತ್ತಮ ಪೂಜಾರಿಯವಿರೆಗೆ ಯಾವುದೇ ನೆರವು ನೀಡದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ

ಕಳೆದ ನ.19 ರಂದು ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿತ್ತು. ಈ ವೇಳೆ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದವು. ಐಸಿಯುನಲ್ಲಿ ಚಿಕಿತ್ಸೆ ಪಡೆದು ನಂತರ ಅವರನ್ನು ಜನರಲ್ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಇದೀಗ ಶನಿವಾರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವ ಪೂಜಾರಿ ಅವರಿಗೆ ಒಂದು ತಿಂಗಳು ಬೆಡ್ ರೆಸ್ಟ್ ಪಡೆಯುವಂತೆ ಸೂಚಿಸಿರುವ ವೈದ್ಯರು, ಪೂರ್ತಿ ಗುಣಮುಖರಾಗಲು ಒಂದು ವರ್ಷ ಹಿಡಿಯಬಹುದು ಎಂದು ಹೇಳಿದ್ದಾರೆ. ಆಸ್ಪತ್ರೆ ಡಿಸ್ಚಾರ್ಜ್ ಆಗಿದ್ದರೂ ಸಹ ಇತರರ ಸಹಾಯವಿಲ್ಲದೆ ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.
ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಘಟನೆ ನಂತರ ರಾಜ್ಯ ಸರ್ಕಾರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಘೋಷಿಸಿತ್ತು. ಆದರೆ ಇದುವರೆಗೂ ಯಾವುದೇ ನೆರವು ನೀಡಲು ಮುಂದಾಗಿಲ್ಲ ಪೂಜಾರಿ ಅವರ ಹಿರಿಯ ಪುತ್ರಿ ಚಿತ್ರಾಕ್ಷಿ ಹೇಳಿದ್ದಾರೆ.































 
 

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು 50 ಸಾವಿರ ರೂ., ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರು ವೈಯಕ್ತಿಕವಾಗಿ 25 ಸಾವಿರ ರೂ. ನೀಡಿರುವುದು ಬಿಟ್ಟರೆ ಸರಕಾರದ ಕಡೆಯಿಂದ ಯಾವುದೇ ನೆರವು ಸಿಕ್ಕಿಲ್ಲ. ಮುಖ್ಯಮಂತ್ರಿಗಳ ಸಹಾಯಹಸ್ತಕ್ಕಾಗಿ ಪೂಜಾರಿ ಕುಟುಂಬ ಕಾಯುತ್ತಿದೆ. ರಾಜ್ಯ ಗೃಹ ಸಚಿವರು ಎಲ್ಲ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದರೂ ಸರ್ಕಾರದಿಂದ ಒಂದು ರೂಪಾಯಿ ಬಿಡುಗಡೆ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ನನ್ನ ತಂದೆಯ ಚಿಕಿತ್ಸೆಗೆ ಔಷಧಗಳನ್ನು ಖರೀದಿಸಲು ಹಣದ ಅವಶ್ಯಕತೆ ಹೆಚ್ಚಿದೆ. ದುಡಿದು ತಿನ್ನುವ ಕುಟುಂಬಕ್ಕೆ ಬೇರೆ ಆದಾಯ ಮೂಲಗಳಿಲ್ಲ. ಈ ವರ್ಷದ ಮೇ ತಿಂಗಳಲ್ಲಿ ನನ್ನ ಮದುವೆ ನಿಶ್ಚಯವಾಗಿದೆ. ಪರಿಹಾರಕ್ಕಾಗಿ ಕುಟುಂಬ ಕಾಯುತ್ತಿದೆ. ಈಗ ನಮ್ಮೆಲ್ಲರ ಜೀವನಾಡಿಯಾಗಿದ್ದ ಆಟೋರಿಕ್ಷಾ ಪೊಲೀಸ್ ಠಾಣೆಯಲ್ಲೇ ತುಕ್ಕು ಹಿಡಿಯುತ್ತಿದೆ ಎಂದು ಚಿತ್ರಾಕ್ಷಿ ಅಳಲು ತೋಡಿಕೊಂಡಿದ್ದಾರೆ.
ಪೂಜಾರಿಯವರ ಹಳೆಯ ಮನೆಯ ನವೀಕರಣ ರೂ.5.5 ಲಕ್ಷ ವೆಚ್ಚದಲ್ಲಿ ಆಗುತ್ತಿದೆ. ಸದ್ಯಕ್ಕೆ ಅವರ ಕುಟುಂಬ ಉಜ್ಜೋಡಿಯಲ್ಲಿ ಬಾಡಿಗೆ ಮನೆಯಲ್ಲಿದೆ. ಕೆಲವು ಸಂಘ ಸಂಸ್ಥೆಗಳು ನೆರವಿನ ಹಸ್ತ ಚಾಚಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top