ಗೆಲ್ಲಲೇ ಬೆಕಾದ ಒತ್ತಡದಲ್ಲಿ ಲಂಕಾ; ಕ್ಲೀನ್‌ಸ್ವೀಪ್ ಭಾರತದ ಗುರಿ
ತಿರುವನಂತಪುರಂ : ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಈಗಾಗಲೇ ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೀಗ ಮೂರನೇ ಹಾಗೂ ಅಂತಿಮ ಪಂದ್ಯಕ್ಕೆ ಸಿದ್ಧವಾಗಿದೆ. ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ಕೊನೆಯ ಪಂದ್ಯ ನಡೆಯಲಿದ್ದು, ರೋಹಿತ್ ಪಡೆ ಲಂಕಾ ತಂಡವನ್ನು ಕ್ಲೀನ್‌ಸ್ವೀಪ್ ಮಾಡುವತ್ತ ಚಿತ್ತ ಹರಿಸಿದೆ. ಈ ಸರಣಿಯಲ್ಲಿ ಭಾರತ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಪಂದ್ಯ ಮಧ್ಯಾಹ್ನ 1.30ಕ್ಕೆ ಶುರುವಾಗುತ್ತದೆ.
ಸರಣಿ ಗೆದ್ದಿರುವ ಕಾರಣ ರೋಹಿತ್ ಪಡೆ ನಾಳೆ ಹೊಸ ಪ್ರಯೋಗವನ್ನು ಮಾಡಬಹುದು. ಇತ್ತ ದಸುನ್ ಶತನ ಪಡೆ ಕ್ಲೀನ್ ಸ್ವೀಪ್ ನಿಂದ ಪಾರಾಗಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಇದೆ.
ಈ ವರ್ಷ ಭಾರತದಲ್ಲೇ ಐಸಿಸಿ ಏಕದಿನ ವಿಶ್ವಕಪ್ ನಡೆಯಲಿರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾಗೆ ಪ್ರತಿ ಪಂದ್ಯವೂ ಮುಖ್ಯವಾಗಿರುತ್ತದೆ. ಲಂಕಾ ವಿರುದ್ಧ ಸರಣಿ ಗೆದ್ದಿದ್ದರೂ ಅಂತಿಮ ಪಂದ್ಯವನ್ನೂ ಸುಲಭವಾಗಿ ಪರಿಗಣಿಸುವಂತಿಲ್ಲ. ಹಿಂದಿನ ಪಂದ್ಯಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಫೀಲ್ಡಿಂಗ್, ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮತ್ತಷ್ಟು ಸುಧಾರಿಸಿಕೊಳ್ಳಬೇಕು.
ಟೀಂ ಇಂಡಿಯಾ ತನ್ನ ತವರು ನೆಲದಲ್ಲಿ ಇನ್ನೂ ಕನಿಷ್ಠ 12 ಏಕದಿನ ಪಂದ್ಯಗಳು ಆಡಲಿದೆ. ಜತೆಗೆ ಏಷ್ಯಾ ಕಪ್ ಕೂಡ ಇದೆ. ಹೀಗಾಗಿ ಪ್ರತಿಪಂದ್ಯದಲ್ಲೂ ಆಟಗಾರರು ತಮ್ಮನ್ನು ತಾವು ಮತ್ತಷ್ಟು ಸವಾಲಿಗೆ ಸಿದ್ಧಗೊಳಿಸಿಕೊಳ್ಳುವ ಅವಶ್ಯಕತೆ ಇದೆ.
ಮುಂದಿನ ದಿನಗಳಲ್ಲಿ ನ್ಯೂಜಿಲೆಂಡ್ ವಿರುದ್ಧವೂ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ ಆಡಲಿದೆ. ಹೀಗಾಗಿ ನಾಳಿನ ಪಂದ್ಯದಲ್ಲಿ ಹೊಸ ಪ್ರಯೋಗ ಮಾಡುವ ಸಾಧ್ಯತೆ ಇದೆ. ಆದರೆ ಯಾರಿಗೆ ಅವಕಾಶ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.