ಲೆಜೆಂಡ್‌ಗಳು ಮತ್ತು ಅವರ ಪ್ರಭಾವಳಿ

ಎಲ್ಲರಿಗೂ ಇದೆ ಒಂದು ಇಮೇಜ್‌

ಪ್ರತಿಯೊಬ್ಬ ಲೆಜೆಂಡ್ ಒಂದು ಪ್ರಭಾವಳಿ ಹೊಂದಿರುತ್ತಾನೆ ಮತ್ತು ಆ ಇಮೇಜ್‌ ಆತನನ್ನು ಗೆಲ್ಲಿಸುತ್ತವೆ. ಮತ್ತೆ ಕೆಲವು ಉದಾಹರಣೆಗಳಿಂದ ಆರಂಭ ಮಾಡುತ್ತೇನೆ.
1) ಭಾರತದ ಮಹೋನ್ನತ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರನ್ನೊಮ್ಮೆ ಕಣ್ಣು ಮುಚ್ಚಿ ನೆನಪಿಸಿಕೊಳ್ಳಿ. ತಕ್ಷಣ ನಮಗೆ ನೆನಪಿಗೆ ಬರುವುದು ಅವರು ತುಂಬಾ ತಾಳ್ಮೆಯಿಂದ ಇಡೀ ದಿನ ನಿಂತು ಆಡಿದ ಟೆಸ್ಟ್ ಇನ್ನಿಂಗ್ಸ್‌ಗಳು. ಅದಕ್ಕೆ ಅನುರೂಪವಾಗಿ ಅವರನ್ನು ವಾಲ್ ಆಫ್ ಕ್ರಿಕೆಟ್ (ಭಾರತೀಯ ಕ್ರಿಕೆಟ್ಟಿನ ಗೋಡೆ) ಎಂದು ಕರೆದಿರುವುದು.
ಆದರೆ ಅವರ ಏಕದಿನದ ಪಂದ್ಯಗಳ ದಾಖಲೆಗಳೂ ಅದ್ಭುತವಾಗಿವೆ. 344 ODI ಪಂದ್ಯಗಳನ್ನು ಆಡಿರುವ ಅವರು 12 ಶತಕ ಕೂಡ ಸಿಡಿಸಿದ್ದಾರೆ. 10,899 ರನ್ ಕೂಡ ಮಾಡಿದ್ದಾರೆ. 1999ರ ವಿಶ್ವಕಪ್ ಪಂದ್ಯಾಟದಲ್ಲಿ ಅವರು ವಿಶ್ವದಾಖಲೆಯ ಜೊತೆಯಾಟ ಆಡಿದ್ದೂ ನಮಗೆ ಯೋಚನೆ ಮಾಡಿದರೆ ನೆನಪಿಗೆ ಬರುತ್ತದೆ. ಅವರು ಐಪಿಎಲ್ ಪಂದ್ಯಗಳಲ್ಲಿ ಹಲವು ವರ್ಷಗಳ ಕಾಲ ಆಡಿದ್ದು, ಸಂಜು ಸ್ಯಾಮ್ಸನ್ ಅಂತಹ ಮಹಾನ್ ಕ್ರಿಕೆಟಿಗರನ್ನು ಕೋಚ್ ಆಗಿ ರೂಪಿಸಿದ್ದು ಕೂಡ ನಮಗೆ ನೆನಪಿಗೆ ಬರುತ್ತದೆ. ಆದರೆ ಮೊದಲು ನೆನಪಿಗೆ ಬರುವುದು ಅದೇ ತಾಳ್ಮೆಯ ಪ್ರತಿರೂಪವಾದ ಮತ್ತು ಡಿಫೆನ್ಸಿವ್ ಆದ ದ್ರಾವಿಡ್ ಮಾತ್ರ.
ಅದು ಅವರ ಪ್ರಭಾವ ಮತ್ತು ಪ್ರಭಾವಳಿ. ಎಂತಹ ದೊಡ್ಡ ಲೆಜೆಂಡ್ ಆದರೂ ತನ್ನ ಇಮೇಜನ್ನು ಬದಲಾಯಿಸುವುದು ತುಂಬ ಕಷ್ಟ. ಏಕೆಂದರೆ ಅವರು ತಮ್ಮ ಇಮೇಜ್ ಮೂಲಕ ಜನರ ಮನಸಿನಲ್ಲಿ ಗಟ್ಟಿಯಾದ ಹೆಜ್ಜೆ ಗುರುತನ್ನು ಮೂಡಿಸಿರುತ್ತಾರೆ. ನಮ್ಮ ಇಮೇಜ್ ನಮಗೆ STRENGTH ಆಗಬೇಕೇ ಹೊರತು LIMIT (ಮಿತಿ) ಆಗಬಾರದು.
2) ಇತ್ತೀಚೆಗೆ ಅಭಿಷೇಕ್ ಬಚ್ಚನ್ ಒಂದು ಪತ್ರಿಕಾಗೋಷ್ಠಿಯಲ್ಲಿ ಚೀರಿ ಚೀರಿ ಹೇಳುತ್ತಿರುವುದನ್ನು ನಾನು ಗಮನಿಸಿದ್ದೇನೆ. ಅವರು ಹೇಳುತ್ತಿದ್ದರು ಏನೆಂದರೆ – ನನ್ನನ್ನು ದಯವಿಟ್ಟು ನನ್ನ ಅಪ್ಪ ಅಮಿತಾಬ್ ಬಚ್ಚನ್ ಜತೆ ಹೋಲಿಕೆ ಮಾಡಬೇಡಿ. ಅವರು ಅವರೇ, ನಾನು ನಾನೇ. ನನ್ನ ಪ್ರತಿಭೆಯೇ ಬೇರೆ. ಅವರ ಪ್ರತಿಭೆಯೇ ಬೇರೆ. ನನ್ನನ್ನು ಯಾರೂ ನನ್ನ ಅಪ್ಪನ ಜೊತೆ ಹೋಲಿಕೆ ಮಾಡಬೇಡಿ ಎಂದು ವಿನಂತಿಯನ್ನು ಮಾಡಿಕೊಂಡಿದ್ದಾರೆ. ಯುವಾ, ರಾವಣ, ಗುರು ಮೊದಲಾದ ಹಿಂದಿ ಸಿನೆಮಾಗಳಲ್ಲಿ ಅವರ ಅಭಿನಯವೂ ಸ್ಮರಣೀಯ ಆಗಿತ್ತು. ಆದರೆ ಅವರನ್ನು ಅವರ ಅಪ್ಪ ಅಮಿತಾಬ್ ಜತೆಗೆ ಹೋಲಿಸಿದರೆ ಅವರು ಡಲ್ ಆಗಿ ಬಿಡುತ್ತಾರೆ.
3) ಮಹಾನ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ತಾನು ಮಹಾ ಕ್ರಿಕೆಟರ್ ಆಗಬೇಕು ಎಂಬ ಹಂಬಲದಿಂದ ಯೋಗರಾಜ್ ಸಿಂಗ್ ಅವರ ತರಬೇತಿ ಕ್ಯಾಪ್ ಸೇರುತ್ತಾನೆ. ಆಗ ಅವನು ಅವನಿಗೆ ಅರಿವಿಲ್ಲದ ಹಾಗೆ ತನ್ನ ಅಪ್ಪನನ್ನು ಕಾಪಿ ಮಾಡುತ್ತಿದ್ದನು. ಆಗ ಯೋಗರಾಜ್ ಸಿಂಗ್ ಅವರು ಅರ್ಜುನನಿಗೆ ಹೇಳಿದ ಪ್ರಮುಖ ಮಾತು ಏನೆಂದರೆ – ಇನ್ನೂ ಮೂರು ತಿಂಗಳು ನೀನು ಸಚಿನ್ ತೆಂಡೂಲ್ಕರ್ ಅವರ ಮಗ ಎಂಬುದನ್ನು ಮರೆತು ಬಾ. ಅದರ ನಂತರ ನಾನು ನಿನಗೆ ತರಬೇತಿ ಕೊಡುತ್ತೇನೆ ಎಂದು.
4) ಯೇಸುದಾಸ್ ಅವರ ಮಗ ಮತ್ತು ಮಗಳು ತುಂಬಾ ಚೆನ್ನಾಗಿ ಹಾಡುತ್ತಾರೆ. ಇಬ್ಬರಿಗೂ ಅವರದ್ದೇ ಸಿಗ್ನೇಚರ್ ವಾಯ್ಸ್ ಇದೆ. ಆದರೆ ಅವರ ಪರಿಚಯ ಮಾಡುವಾಗ ಇಂಥವರ ಮಗ, ಇಂಥವರ ಮಗಳು ಎಂದೇ ಪರಿಚಯ ಮಾಡುತ್ತಾರೆ. ಆಗ ಅವರ ಪ್ರತಿಭೆ ಮಸುಕು ಆಗಿಬಿಡುತ್ತದೆ.
5) ರಾಜಕುಮಾರ್ ಅವರು ತಮ್ಮ 205 ಸಿನೆಮಾಗಳ ಮೂಲಕ ದೇವತಾ ಮನುಷ್ಯನ ಇಮೇಜ್ ಪಡೆದುಕೊಂಡರು. ಅವರು ಸಿನೆಮಾಗಳಲ್ಲಿ ವಹಿಸಿದ ಪಾತ್ರಗಳು ಆದರ್ಶದ ಪ್ರತಿರೂಪವೇ ಆಗಿದ್ದವು. ಅವರು ತನ್ನ ಯಾವ ಸಿನೆಮಾಗಳಲ್ಲಿ ಕೂಡ ಕುಡಿತ, ಜೂಜು, ಸಿಗರೇಟ್ ಸೇವನೆ, ಅಶ್ಲೀಲ ಪದ ಬಳಕೆ ಮಾಡಲಿಲ್ಲ. ಅದು ಅವರ ಶುದ್ಧವಾದ ಇಮೇಜ್. ಮುಂದೆ ಅವರ ಮೂರು ಜನ ಮಕ್ಕಳು (ಶಿವಣ್ಣ, ರಾಘವೇಂದ್ರ, ಪುನೀತ್) ತಮ್ಮ ಬೇರೆ ಪ್ರತಿಭೆಗಳ ಮೂಲಕ ಬೇರೆಯೇ ಇಮೇಜ್ ಪಡೆದುಕೊಂಡರು. ಅವರ್ಯಾರೂ ಅಪ್ಪನ ಪ್ರಭಾವಳಿಗೆ ಜೋತು ಬೀಳದೆ ತಮ್ಮದೇ ದಾರಿ ರೂಪಿಸಿಕೊಂಡರು. ಅದರಿಂದ ಅವರು ತಮ್ಮ ಇಮೇಜನ್ನು ಕಳೆದುಕೊಳ್ಳಲಿಲ್ಲ.
6) ಎಂಬತ್ತರ ದಶಕದ ಶ್ರೇಷ್ಠ ಕ್ರಿಕೆಟ್ ಬೌಲರ್ ಚೇತನ್ ಶರ್ಮಾ ಹೇಳಿದ ಮಾತು ನನಗೆ ಗಾಢವಾಗಿ ತಟ್ಟಿತು.
ಅವರು ಹೇಳಿದ್ದು – ನಾನು ವಿಶ್ವಕಪ್ಪಿನಲ್ಲಿ ಗೆದ್ದ ಟೀಮನಲ್ಲಿ ಆಡಿದ್ದೇನೆ. ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ನಾನೇ. ಆದರೆ ಜನರಿಗೆ ಅದು ಮರೆತುಹೋಗಿದೆ. ನನ್ನನ್ನು ಎಲ್ಲ ಭಾರತೀಯರು ನೆನಪಿಸಿಕೊಳ್ಳುವುದು ಬೇರೆಯೇ ಕಾರಣಕ್ಕೆ. ಆಸ್ಟ್ರೆಲೇಷ್ಯಾ ಕಪ್‌ ಫೈನಲ್ ಪಂದ್ಯದಲ್ಲಿ ಕೊನೆಯ ಚೆಂಡಿನಲ್ಲಿ ನನ್ನ ಬಾಲಿಗೆ ಸಿಕ್ಸರ್ ಹೊಡೆದು ಜಾವೇದ್ ಮಿಯಾಂದಾದ್ ಪಾಕಿಸ್ಥಾನವನ್ನು ಗೆಲ್ಲಿಸಿಕೊಟ್ಟ. ಅದು ಜನರಿಗೆ ಇಂದಿಗೂ ನೆನಪಿದೆ.

ಭರತವಾಕ್ಯ































 
 

ನಮ್ಮ ಒಳ್ಳೆಯ ಅಥವಾ ಕೆಟ್ಟ ಕೆಲಸಗಳಿಂದ ಜನರು ನಮ್ಮನ್ನು ಹೇಗೆ ನೆನಪು ಇಟ್ಟುಕೊಳ್ಳುತ್ತಾರೆ ಅದು ನಮ್ಮ ಇಮೇಜ್ ಅಥವಾ ಪ್ರಭಾವಳಿ. ಅದನ್ನು ನಿರ್ಧರಿಸುವುದು ನಾವು ಅಲ್ಲವೇ ಅಲ್ಲ. ನಮ್ಮ ಸುತ್ತಲಿನ ಜನರು, ಅಭಿಮಾನಿಗಳು, ಓರಗೆಯ ಗೆಳೆಯರು ನಮ್ಮ ಇಮೇಜ್ ರೂಪಿಸುತ್ತಾರೆ. ಅದು ನಾವು ಎಣಿಸಿದ ಹಾಗೆ ಇರಬೇಕು ಎಂದು ಯಾರಾದರೂ ನಿರೀಕ್ಷೆ ಮಾಡಿದರೆ ಕೊನೆಗೆ ಉಳಿಯುವುದು ನಿರಾಸೆ ಮಾತ್ರ. ಆ ಇಮೇಜ್ ಪಡೆಯಲು ನಾವೇನೂ ತುಂಬಾ ಕಷ್ಟ ಪಡಬೇಕು ಅಂತ ಇಲ್ಲ. ಸಹಜ ಆಗಿದ್ದರೆ ಸಾಕು. ಅಹಂ ತೊರೆದರೆ ಆಯ್ತು. ನಮ್ಮ ಅಭ್ಯಾಸಗಳು, ಹವ್ಯಾಸಗಳು ಶುದ್ಧ ಆಗಿದ್ದರೆ ಸಾಕು. ಆ ಇಮೇಜ್ ನಿಮ್ಮನ್ನು ಎಂದಿಗೂ ಗೆಲುವಿನ ಹಳಿಯಲ್ಲಿ ನಿಲ್ಲಿಸುತ್ತದೆ.
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top