ಅಜ್ಞಾತ ಸ್ಥಳದಲ್ಲಿ ಸ್ಯಾಂಟ್ರೊ ರವಿ ವಿಚಾರಣೆ

ಇಂದು ನ್ಯಾಯಾಲಯಕ್ಕೆ ಹಾಜರು

ಬೆಂಗಳೂರು: ವೇಶ್ಯಾವಾಟಿಕೆ, ಅಕ್ರಮ ವರ್ಗಾವಣೆ, ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಸ್ಯಾಂಟ್ರೊ ರವಿಯನ್ನು ಕರ್ನಾಟಕ ಪೊಲೀಸರು ಗುಜರಾತ್​ನಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆತಂದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಕಣ್ಣುತಪ್ಪಿಸಿ ರವಿಯನ್ನು ಪೊಲೀಸರು ಹೊರಗೆ ಕರೆದೊಯ್ದಿದ್ದಾರೆ. ನಿಲ್ದಾಣದ ಒಂದು ದ್ವಾರದಲ್ಲಿ ಎಲ್ಲರಿಗೂ ಕಾಣಿಸುವಂತೆ, ಮತ್ತೊಂದು ದ್ವಾರದಲ್ಲಿ ಗೌಪ್ಯವಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ವಿಮಾನ ನಿಲ್ದಾಣದ ಭದ್ರತಾಪಡೆಯ ಗೇಟ್‌ನಿಂದ ಹೊರಗೆ ಕರೆದೊಯ್ಯಲಾಗಿದೆ.
ರಾಯಚೂರು, ಮಂಡ್ಯ ಹಾಗೂ ಮೈಸೂರು ಪೊಲೀಸರು ಸಂಘಟಿತ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಗುಜರಾತ್​ನಲ್ಲಿ ಸ್ಯಾಂಟ್ರೊ ರವಿಯನ್ನು ಪತ್ತೆ ಮಾಡಿದ್ದರು. ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ರಾತ್ರಿ 11.30ಕ್ಕೆ ‘ಆಕಾಶ್ ಏರ್’ ವಿಮಾನದಲ್ಲಿ ರವಿಯನ್ನು ಬೆಂಗಳೂರಿಗೆ ಕರೆತರಲಾಯಿತು. ರಸ್ತೆ ಮಾರ್ಗದಲ್ಲಿ ರವಿಯನ್ನು ಮೈಸೂರಿಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಂದು ನ್ಯಾಯಾಧೀಶರ ಎದುರು ರವಿಯನ್ನು ಹಾಜರಿಪಡಿಸಲಾಗುವುದು. ನಂತರ ಪೊಲೀಸರು ವಿಚಾರಣೆ ತೀವ್ರಗೊಳಿಸಲಿದ್ದಾರೆ.
ಸ್ಯಾಂಟ್ರೊ ರವಿ ಗುಜರಾತ್​ನಲ್ಲಿ ಇರಬಹುದು ಎಂಬ ಅನುಮಾನದ ಮೇಲೆ ಕರ್ನಾಟಕ ಪೊಲೀಸರ ತಂಡವನ್ನು ತರಾತುರಿಯಲ್ಲಿ ಅಹಮದಾಬಾದ್​ಗೆ ಕಳಿಸಲಾಗಿತ್ತು. ಈ ಪೈಕಿ ಮೈಸೂರು ಪೊಲೀಸರ ಬಳಿ ಸ್ಯಾಂಟ್ರೊ ರವಿಯ ಹಳೆಯ ಮೂರು ಫೋಟೊಗಳಿದ್ದವು. ಅವನ ತಲೆಯಲ್ಲಿ ಕೂದಲು ಇಲ್ಲ. ಹೀಗಾಗಿ ಟೋಪನ್ ಧರಿಸುತ್ತಾನೆ ಎಂಬ ಮಾಹಿತಿಯಿದ್ದ ಪೊಲೀಸರು ಬೋಳುತಲೆ, ಗಡ್ಡಮೀಸೆ ಇಲ್ಲದ ರೇಖಾಚಿತ್ರಗಳನ್ನು ಬರೆಸಿಕೊಂಡು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು. ಪೊಲೀಸರ ಲೆಕ್ಕಾಚಾರದಂತೆ ಅವನೂ ಗುರುತು ಬದಲಿಸಿಕೊಂಡಿದ್ದ. ಆದರೆ ಸಿದ್ಧತೆ ಮಾಡಿಕೊಂಡಿದ್ದ ಪೊಲೀಸರು ಅವನನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾದರು.
ಮೈಸೂರಿನ ಕೆ.ಎಸ್.ಮಂಜುನಾಥ ಅಲಿಯಾಸ್​ ಸ್ಯಾಂಟ್ರೊ ರವಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ. ಪೊಲೀಸರು ಹುಡುಕಾಟ ಆರಂಭಿಸಿದ 11 ದಿನಗಳ ಬಳಿಕ ಶುಕ್ರವಾರ ಗುಜರಾತ್​ನ ಅಹಮದಾಬಾದ್​ನಲ್ಲಿ ಸಿಕ್ಕಿಬಿದ್ದಿದ್ದಾನೆ. ಮಂತ್ರಾಲಯಕ್ಕೆ ಬಂದಿದ್ದ ಸ್ಯಾಂಟ್ರೊ ರವಿಯ ಆಪ್ತ ಲಷ್ಮಿತ್ ಅಲಿಯಾಸ್ ಚೇತನ್​ ಎಂಬಾತನನ್ನು ರಾಯಚೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರವಿಯ ಸುಳಿವು ಪತ್ತೆಯಾಗಿತ್ತು.
ಚೇತನ್​ನನ್ನು ಮೈಸೂರಿಗೆ ಕರೆದೊಯ್ದು ಅಲ್ಲಿ ಇನ್ನಷ್ಟು ಮಾಹಿತಿ ಸಂಗ್ರಹಿಸಿದ ನಂತರ, ಸ್ಯಾಂಟ್ರೊ ರವಿ ಗುಜರಾತ್​ನಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ಬಲೆ ಬೀಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top