ಬೆಟ್ಟಂಪಾಡಿ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ಪುತ್ತೂರು: ತ್ಯಾಗ ಮತ್ತು ಸೇವೆ ಜೀವನದ ಪರಮೋಚ್ಚ ಧರ್ಮ ಎಂದು ಸವಣೂರು ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ ವಿ ಸೂರ್ಯನಾರಾಯಣ ಹೇಳಿದರು.ಆಂತರಿಕ ಗುಣಮಟ್ಟ ಭರವಸಾ ಕೋಶ , ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳು ಹಾಗೂ ಯೂತ್ ರೆಡ್ ಕ್ರಾಸ್ ಘಟಕಗಳ ವತಿಯಿಂದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿವೇಕಾನಂದರ ಧರ್ಮದ ವ್ಯಾಖ್ಯಾನವೇ ಬೇರೆ ಇತ್ತು. ‘ದೇವರು ಬಂದು ಭೂಮಂಡಲವನ್ನು ಸೃಷ್ಟಿಸಿದ, ಅಂದಿನಿಂದ ಕಾಲ ಸ್ಥಬ್ಧವಾಗಿದೆ ಎನ್ನುವುದೆಲ್ಲ ಸುಳ್ಳು, ದೇವರು ಎನ್ನುವವನ ಅಸ್ತಿತ್ವ ಪ್ರತಿಯೊಬ್ಬನಿಗೂ ಹೃದಯದ ಮೂಲಕ ಅರಿವಾಗುವಂತಹದ್ದು. ಇದಕ್ಕಿಂತಲೂ ಮುಖ್ಯವಾದುದು ಭೂಮಂಡಲದ ಎಲ್ಲ ಜೀವಿಗಳ ಹೃದಯದಲ್ಲಿ ದೇವರಿದ್ದಾನೆ ಎಂಬ ಅರಿವು. ವ್ಯತ್ಯಾಸ ಇರುವುದು ಅದರ ಅಭಿವ್ಯಕ್ತಿಯ ರೂಪಗಳಲ್ಲಿ ಮಾತ್ರ. ವಿವೇಕಾನಂದರು ಯುವ ಸನ್ಯಾಸಿ ಮತ್ತು ಅವರ ಬೋಧನೆಗಳು ಅನೇಕರಿಗೆ ಸ್ಫೂರ್ತಿಯಾಗಿದೆ, ಅವರ ಮಾತುಗಳು ವಿಶೇಷವಾಗಿ ದೇಶದ ಯುವಕರಿಗೆ ಸ್ವಯಂ ಸುಧಾರಣೆಯ ಗುರಿಗಳಾಗಿವೆ. ವಿಶ್ವವೇ ಒಪ್ಪಿಕೊಂಡ ಸಂತ ಸ್ವಾಮಿ ವಿವೇಕಾನಂದರು ತೋರಿಸಿ ಕೊಟ್ಟ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಯಶಸ್ಸು ಖಂಡಿತ ಹಾಗೂ ಜೀವನ ಸಾರ್ಥಕ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಮಾತನಾಡಿ, ಸ್ವಾಮಿ ವಿವೇಕಾನಂದರು ಇಂದಿನ ಕಾಲಮಾನದಲ್ಲಿ ಯಾಕೆ ಮುಖ್ಯವಾಗುತ್ತಾರೆ ಎಂದರೆ ಅವರು ನುಡಿದಂತೆ ನಡೆದವರು. ನುಡಿ ಒಂದು, ನಡೆ ಇನ್ನೊಂದು ಎಂಬಂತೆ ಜೀವಿಸುವ ಬಹುಪಾಲು ಜನರಿಗೆ ಹೋಲಿಸಿದಾಗ, ನುಡಿದಂತೆ ನಡೆದ ಸ್ವಾಮಿ ವಿವೇಕಾನಂದರದ್ದು ಪ್ರತಿಯೊಬ್ಬರನ್ನೂ ಪ್ರಭಾವಿಸಬಲ್ಲ ಪ್ರಖರ ವ್ಯಕ್ತಿತ್ವ. ಅವರು ಸಮಾಜದ ಸುಧಾರಣೆಗೆ ಅವಿರತವಾಗಿ ಶ್ರಮಿಸಿದವರು, ಬಡವರು ಮತ್ತು ನಿರ್ಗತಿಕರ ಸೇವೆಯಲ್ಲಿ, ತಮ್ಮ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿದವರು ಎಂದು ಹೇಳಿದರು.

ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ. ಕಾಂತೇಶ್ ಎಸ್ ಮಾತನಾಡಿ, ಸ್ವಾಮಿ ವಿವೇಕಾನಂದರ ಯೋಜನೆಗಳು ಎಷ್ಟು ಪರಿಣಾಮಕಾರಿ ಎಂದರೆ ಇವರು ಯುವಜನರ ಮೇಲಿರಿಸಿದ್ದ ನಂಬಿಕೆ. ಇಂದು ನವ ಭಾರತ ನಿರ್ಮಾಣದಲ್ಲಿ ಸಕಾರಗೊಂಡಿದೆ. ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ವ್ಯಕ್ತಿತ್ವ ವಿಕಸನವು ಸಾಧ್ಯ ಎಂದು ಹೇಳಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹರಿಪ್ರಸಾದ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಮಿ ವಿವೇಕಾನಂದರನ್ನು ಭಾರತ ದೇಶ ಮಾತ್ರವಲ್ಲ ಇಡೀ ಜಗತ್ತು ಬಹಳ ಗೌರವಾದರಗಳಿಂದ ನೆನಪಿಸಿಕೊಳ್ಳುತ್ತದೆ. ಸ್ವಾಮಿ ವಿವೇಕಾನಂದರ ಜೀವನ ಸಾಧನೆ ಯುವಕರಿಗೆ ಪ್ರೇರಣೆಯಾಗಬೇಕು ಎಂದರು.
ಆಳ್ವಾಸ್ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಪಾಲ್ಗೊಂಡ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾಲೇಜಿನ ಯೂತ್ ರೆಡ್ ಕ್ರಾಸ್ ಯೋಜನಾಧಿಕಾರಿಗಳಾದ ಪ್ರೊ.ದೇವರಾಜ್ ಆರ್, ರೋವರ್ಸ್ ಲೀಡರ್ ಗಳಾದ ಪ್ರೊ.ತಿಮ್ಮಯ್ಯ ಎಲ್ ಎನ್ ಮತ್ತು ಡಾ.ಪೊಡಿಯ ಹಾಗೂ ರೇಂಜರ್ಸ್ ಲೀಡರ್ ಪ್ರೊ.ಮಂಜುಳಾ ದೇವಿ ಪಿ. ಉಪಸ್ಥಿತರಿದ್ದರು.ಸ್ವಯಂಸೇವಕ ಆದರ್ಶ್ ಎನ್ ಸ್ವಾಗತಿಸಿದರು. ಉಪನ್ಯಾಸಕರಾದ ದೇವರಾಜ್ ಆರ್ ವಂದಿಸಿದರು. ಸ್ವಯಂ ಸೇವಕಿ ಪಲ್ಲವಿ ಬಿ ರೈ ನಿರೂಪಿಸಿದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top