ಮೀಸಲಾತಿ ಎಂಬ ಜೇನುಗೂಡಿಗೆ ಕಲ್ಲು ಹೊಡೆದ ಬಳಿಕ…

ರಾಜಕೀಯ ಲಾಭಕ್ಕೆ ಅಸ್ತ್ರ ; ಸಂವಿಧಾನ ಆಶಯ ಬುಡಮೇಲು

ಮೀಸಲಾತಿ ಸಂವಿಧಾನಿಕವಾಗಿ ಜಾರಿಯಾಗಿರುವ ಒಂದು ವ್ಯವಸ್ಥೆ. ಇದು ಕೆಳವರ್ಗದ ಜನರನ್ನು ಸಮಾಜದ ಎಲ್ಲ ರಂಗದಲ್ಲೂ ಪಾಲ್ಗೊಳ್ಳುವಂತೆ ಮಾಡಿ ತಾರತಮ್ಯ ಹೋಗಲಾಡಿಸುವ ಉದ್ದೇಶ ಹೊಂದಿದೆ. ಇದು ಸ್ವಲ್ಪಮಟ್ಟಿಗೆ ಯಶಸ್ವಿಯೂ ಆಗಿದೆ. ಆದರೆ ಇತ್ತೀಚೆಗೆ ಸರ್ಕಾರ ಈ ಮೀಸಲಾತಿ ಎಂಬ ಜೇನುಗೂಡನ್ನು ಕೆದಕಲು ಹೋಗಿ ಇರಲಾರದೆ ಇರುವೆ ಬಿಟ್ಟುಕೊಂಡಂತೆ ಆಗಿದೆ. ಇಂದು ಸಮಾಜದ ಹಲವಾರು ಪಂಗಡಗಳು ಮೀಸಲಾತಿ ವಿರುದ್ಧ ಧ್ವನಿ ಎತ್ತಲು ಶುರುಮಾಡಿವೆ.
“ಮೀಸಲಾತಿ ಕುರಿತು ವೈಜ್ಞಾನಿಕವಾದ ಸ್ಪಷ್ಟ ನೀತಿ ರೂಪಿಸದ ಪರಿಣಾಮ ಈಗ ಹಲವು ರೀತಿಯ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಿದೆ” ಎಂದು ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಅಭಿಪ್ರಾಯ ಪಟ್ಟಿರುವುದನ್ನು ನಾವಿಲ್ಲಿ ಸ್ಮರಿಸಬಹುದು.
ಜಾತ್ಯಾಧಾರಿತ, ಧರ್ಮಾಧಾರಿತ, ಲಿಂಗಾಧಾರಿತ, ಅಂಗವಿಕಲಾಧಾರಿತ, ಕ್ರೀಡಾಧಾರಿತ, ಸೇನಾಧಾರಿತ ಇನ್ನು ಅನೇಕ ರೀತಿಯ ಮೀಸಲಾತಿಗಳು ಪ್ರಸ್ತುತ ನಮ್ಮ ದೇಶದಲ್ಲಿವೆ. ಮೇಲ್ವರ್ಗ ಮತ್ತು ಅಸ್ಪೃಶ್ಯರ ನಡುವೆ ನಿರ್ಮಿಸಿದ ಗೋಡೆಯನ್ನು ಕೆಡವಿ ಹಾಕಲು ಮಾಡಿದ ನಿರಂತರ ಪ್ರಯತ್ನಗಳ ಫಲವಾಗಿ ಮೀಸಲಾತಿ ವ್ಯವಸ್ಥೆ ಜಾರಿಗೆ ಬಂತು. ಅದು ಹಲವಾರು ಸುಧಾರಣೆಗಳೊಂದಿಗೆ ಪ್ರಸ್ತುತದಲ್ಲಿಯೂ ಜಾರಿಯಲ್ಲಿದೆ.

ಇಂದು ಮೀಸಲಾತಿ ರಾಜಕೀಯ ಲಾಭಕ್ಕೆ ಸಲಕರಣೆಯಾಗಿದೆ. ಜಾತ್ಯಾಧಾರಿತ ಮೀಸಲಾತಿ ಕೇವಲ ಸಮಾಜದಲ್ಲಿ ಜಾತಿಯ ಪ್ರಬಲತೆಗೆ ಕಾರಣವಾಗುತ್ತಿದೆ. ಇದು ಸಂವಿಧಾನಿಕವಾಗಿ ನೀಡಿದ ಸಮಾನತೆಯ ಅರ್ಥವನ್ನು ದುರ್ಬಲಗೊಳಿಸಿ ಸಾಮಾಜಿಕ ಪರಿಕಲ್ಪನೆಗೆ ಚ್ಯುತಿ ತರುತ್ತಿದೆ.
ಮೀಸಲಾತಿ ಪದ್ಧತಿಯನ್ನು ಜಾತಿ ಆಧಾರದ ಮೇಲೆ ಕೊಡುವುದಕ್ಕಿಂತ ಕುಟುಂಬದ ಆದಾಯವನ್ನು ಪರಿಗಣಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಹಾಗಾದಲ್ಲಿ ಹಿಂದುಳಿದ ಸಮುದಾಯಗಳು ಹಾಗೂ ಹಿಂದುಳಿದ ವರ್ಗಗಳು ಸಮಾಜದಲ್ಲಿ ತಮ್ಮ ಜೀವನಮಟ್ಟ ಮತ್ತು ಸ್ಥಾನಮಾನವನ್ನು ಸುಧಾರಿಸಿ ಉನ್ನತ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗುವುದಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಕಾಣಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ಇದೆ.































 
 

ಮೀಸಲಾತಿ ಪರಿಷ್ಕರಣೆ ಒಂದು ಉತ್ತಮ ನಿರ್ಧಾರವಾದರೂ ಸಮಾಜದಲ್ಲಿ ಕೆಳವರ್ಗದ ಜನರ ಸ್ಥಾನಮಾನಗಳ ಬಗ್ಗೆ ಸಮೀಕ್ಷೆ ನಡೆಸಿ ನಿರ್ದಿಷ್ಟ ಮಾನದಂಡಗಳನ್ನು ರೂಪಿಸಿ, ಈ ಬಗ್ಗೆ ಸುದೀರ್ಘಾವಧಿಯ ಯೋಜನೆಯನ್ನು ರೂಪಿಸಬೇಕು. ನಿರ್ಧಾರಗಳನ್ನು ವಾಸ್ತವ ಆಧಾರಗಳಿಗನುಸಾರವಾಗಿ ತೆಗೆದುಕೊಂಡು ಇದರ ಪ್ರಯೋಜನ ಸೂಕ್ತ ಜನರಿಗೆ ತಲುಪುವಂತೆ ಮಾಡಬೇಕು. ಆಗ ಮಾತ್ರ ಕೆಳವರ್ಗದ ಜನರನ್ನು ನಿಜವಾಗಿಯೂ ಮೇಲೆತ್ತಲು ಸಾಧ್ಯ.
ಪ್ರಸ್ತುತ ಮೀಸಲಾತಿಗೋಸ್ಕರ ಸಮಾಜದ ಎಲ್ಲ ವರ್ಗಗಳು ತುದಿಗಾಲಿನಲ್ಲಿ ನಿಂತಿವೆ. ಇಲ್ಲಿ ಯಾರನ್ನು ಸಮಾಧಾನ ಪಡಿಸುವುದು ಎಂಬುದೇ ಸರ್ಕಾರಕ್ಕೊಂದು ಸವಾಲಾಗಿದೆ. ಈ ಸಂಬಂಧ ನ್ಯಾಯಾಲಯ ಈಗಾಗಲೇ ಸೂಕ್ತ ಅಧ್ಯಯನ ಮತ್ತು ಸಮಗ್ರ ವರದಿಯ ಹೊರತು ತನ್ನ ಅಂತಿಮ ತೀರ್ಪು ನೀಡುವವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶಿಸಿದೆ.
ಸರ್ಕಾರ ಈ ಮೀಸಲಾತಿ ಎಂಬ ಜೇನುಗೂಡನ್ನು ಚುನಾವಣಾ ಹೊಸ್ತಿಲಲ್ಲಿ ಕೆದಕಲು ಹೋಗಿ ಜೇನಿನ ಸಿಹಿಯನ್ನು ಸವಿಯುವುದೋ ಅಥವಾ ಅದರಿಂದ ಕಚ್ಚಿಸಿಕೊಳ್ಳುವುದೋ ಎಂದು ಮುಂಬರುವ ಫಲಿತಾಂಶ ಉತ್ತರಿಸಲಿದೆ.
ಶೈಲೇಶ್ ಶೆಟ್ಟಿ ಬೈಲೂರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top