ಜಲಸಿರಿ ಯೋಜನೆಯ ಕಾಮಗಾರಿ | ಶಾಸಕರ ನೇತೃತ್ವದಲ್ಲಿ ಪರಿಶೀಲನಾ ಸಭೆ

ಪುತ್ತೂರು: ಜಲಸಿರಿ ಯೋಜನೆಯ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕಾಮಗಾರಿ ನಿರ್ವಹಿಸಬೇಕಾದ ಜವಾಬ್ದಾರಿ ಜಲಸಿರಿ ಯೋಜನೆಯ ಅಧಿಕಾರಿಗಳಿಗಿದೆ. ಕಾಮಗಾರಿ ನಡೆಸಿದಲ್ಲಿ ಹಿಂದಿನಂತೆ ರಸ್ತೆಯ ಪುನರ್‍ ನಿರ್ಮಾಣ, ಮುಂದೆ ಕಾಮಗಾರಿ ಆಗಬೇಕಾದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾಮಗಾರಿ ನಿರ್ವಹಿಸುವಂತೆ ಶಾಸಕ ಸಂಜೀವ ಮಠಂದೂರು ಸೂಚನೆ ನೀಡಿದರು.

ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಜ. 13ರಂದು ನಡೆದ ಜಲಸಿರಿ ಯೋಜನೆಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಒಟ್ಟು 62 ದೂರುಗಳು ಜಲಸಿರಿ ಯೋಜನೆಯ ಬಗ್ಗೆ ಸಾರ್ವಜನಿಕರಿಂದ ಸಲ್ಲಿಕೆಯಾಗಿದೆ. ಇದರಲ್ಲಿ 42 ದೂರುಗಳು ಪರಿಶೀಲನೆಗೆ ಒಳಗಾಗಿ ಅಂತಿಮಗೊಂಡಿವೆ. ಅಂದರೆ ಜಲಸಿರಿ ಯೋಜನೆಯಿಂದ ಎಷ್ಟು ಸಮಸ್ಯೆಯಾಗಿದೆ ಎನ್ನುವುದಕ್ಕೆ ಸಾಕ್ಷಿ ಎಂದರು.





























 
 

ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಇಂಜಿನಿಯರ್ ಕನಿಷ್ಕ ಎಸ್. ಚಂದ್ರ ಮಾತನಾಡಿ, ಜಲಸಿರಿ ಯೋಜನೆಯ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಅನುಮತಿ ಪಡೆದುಕೊಂಡು, ನಿಗದಿತ ಶುಲ್ಕ ಪಾವತಿಸಿ ಕಾಮಗಾರಿ ನಡೆಸಬೇಕು ಎಂಬ ಕಾನೂನು ಇದೆ. ಇದರ ಬಗ್ಗೆ ಯೋಜನೆಯ ಸಂಬಂಧಪಟ್ಟವರಿಗೆ ಪತ್ರ ಬರೆದು ಸೂಚಿಸಲಾಗಿತ್ತು. ಆದರೆ ಇದಾವುದನ್ನು ಪಾಲಿಸಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ನಡೆಯುವ ಕಾಮಗಾರಿ ಎನ್ನುವ ಉದ್ದೇಶದಿಂದ, ವಿನಾಯಿತಿಯನ್ನು ನೀಡಿದ್ದೇವೆ. ಆದರೆ ಕಾಮಗಾರಿ ನಡೆದ ಬಳಿಕವೂ, ರಸ್ತೆಯನ್ನು ಯಥಾಸ್ಥಿತಿಯಲ್ಲಿ ನಿರ್ಮಾಣ ಮಾಡಿಕೊಡಬೇಕಿದೆ. ಅದನ್ನು ಮಾಡದೇ ಇರುವುದರಿಂದ, ಬೈಕ್ ಸ್ಕಿಡ್ ಆಗಿ ಅಪಘಾತ ನಡೆದ ಉದಾಹರಣೆ ಇದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಜಲಸಿರಿ ಯೋಜನೆಯ ಇಂಜಿನಿಯರ್, ಅಧಿಕಾರಿಗಳಿಗೆ ತಾವು ಮಾಡಿದ್ದೇ ಕಾರುಬಾರು ಎಂಬಂತಾಗಿದೆಯೇ ಎಂದು ಗರಂ ಆಗಿಯೇ ಪ್ರಶ್ನಿಸಿದರು. ಜನರ ಹಿತದೃಷ್ಟಿಯಿಂದ ಯೋಜನೆಯನ್ನು ಜಾರಿಗೆ ತರುತ್ತಿರುವುದು. ಇದನ್ನು ಕಾರ್ಯರೂಪದ ಸಂದರ್ಭದಲ್ಲಿ ಜನರಿಗೆ ಇನ್ನಷ್ಟು ಸಮಸ್ಯೆ ಕೊಡುವುದು ಸರಿಯಲ್ಲ. ಇಂತಹ ಸಮಸ್ಯೆ ಮುಂದೆ ಆಗದಂತೆ ಎಚ್ಚರ ವಹಿಸಿ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಕಳೆದ 3 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಹೇಳಿದ ಮಾತಿನಂತೆ ಯೋಜನೆಯ ಅಧಿಕಾರಿಗಳು ವರ್ತಿಸುತ್ತಿಲ್ಲ. ಸಮಸ್ಯೆಗಳ ಬಗ್ಗೆ ಗಮನ ಸೆಳೆದು, ಸೆಳೆದು ಸಾಕಾಗಿದೆ. ಇಂದಿನ ಸಭೆಯಲ್ಲಿ ಮಾತನಾಡಬಾರದು ಎಂದು ನಿರ್ಧರಿಸಿದ್ದೆ. ಆದರೂ ಮಾತನಾಡುತ್ತಿದ್ದೇನೆ ಎಂದರು.

ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂದು ತಿಳಿಸಿದ ಸದಸ್ಯರು, ಪೈಪ್ ಲೈನ್ ಅಳವಡಿಕೆಗಾಗಿ ಅಗೆದ ಹೊಂಡಕ್ಕೆ ಬೆಕ್ಕು, ನಾಯಿ ಬಿದ್ದು ಸಾಯುತ್ತಿವೆ. ಬೈಕ್‍ಗಳು ಸ್ಕಿಡ್ ಆಗಿ ಬೀಳುತ್ತಿವೆ. ಮಾತ್ರವಲ್ಲ, ಮೊದಲು ಸರಿಯಾಗಿ ನೀರು ಬರುತ್ತಿದ್ದ ಪ್ರದೇಶದಲ್ಲಿ ಇಂದು ನೀರೇ ಬಾರದಂತಾಗಿದೆ ಎಂದು ದೂರಿದರು. ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಜಲಸಿರಿ ಯೋಜನೆಯ ಮುಖ್ಯ ಇಂಜಿನಿಯರ್ ರಾಜಾರಾಮ್ ಉಪಸ್ಥಿತರಿದ್ದರು. ಪೌರಾಯುಕ್ತ ಮಧು ಎಸ್. ಮನೋಹರ್ ಸ್ವಾಗತಿಸಿ, ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top