ಸಂತೂರ್ ಸಾಮ್ರಾಟ ಶಿವಕುಮಾರ್ ಶರ್ಮಾ

ಮಾಧುರ್ಯಕ್ಕೆ ಇನ್ನೊಂದು ಹೆಸರೇ ಅವರು

ಅವರು ಬದುಕಿದ್ದಿದ್ದರೆ ಇಂದು (ಜನವರಿ 13) 84 ವರ್ಷ ತುಂಬುತ್ತಿತ್ತು. ನೂರು ತಂತಿಗಳ ಅಪೂರ್ವ ವಾದ್ಯವಾದ ಸಂತೂರಿಗೆ ಜಾಗತಿಕ ಮಾನ್ಯತೆಯನ್ನು ತಂದುಕೊಟ್ಟ ಮೇರು ಕಲಾವಿದ ಅವರು. ಅವರ ಶಾಸ್ತ್ರೀಯ ಸಂಗೀತದ ಪ್ರಸ್ತುತಿಯನ್ನು ಕೇಳುತ್ತಾ ಹೋದಂತೆ ನಾನಂತೂ ಮೂಕವಿಸ್ಮಿತನಾಗಿದ್ದೇನೆ. ಅವರು ತಬಲಾ ವಾದನವನ್ನು ಕೂಡ ಶಾಸ್ತ್ರೀಯವಾಗಿ ಕಲಿತಿದ್ದಾರೆ.
ಅವರು ಜಮ್ಮು ಕಾಶ್ಮೀರದ ಒಂದು ಸಣ್ಣ ಸಾಂಸ್ಕೃತಿಕ ಗ್ರಾಮದಿಂದ ಬಂದವರು. ಅವರ ತಂದೆ ಪಂಡಿತ್ ಉಮಾದತ್ತ ಶರ್ಮಾ. ಅವರು ಕೀರ್ತಿ ಪಡೆದ ಸಂಗೀತ ವಿದ್ವಾಂಸರು. ಡೋಗ್ರಿ ಅವರ ಮಾತೃಭಾಷೆ. ಐದನೇ ವರ್ಷದಲ್ಲಿ ತಂದೆಯಿಂದ ಸಂಗೀತ ಪಾಠ ಆರಂಭ. ಅಪ್ಪನಿಗೆ ಮಗ ಸಂಗೀತದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ಕನಸು ಇತ್ತು. 13ನೇ ವಯಸ್ಸಿಗೆ ಮಗನ ಕೈಯ್ಯಲ್ಲಿ ಸಂತೂರು ಎಂಬ ಮಹಾ ವಾದ್ಯವನ್ನು ಇಟ್ಟು ಅಪ್ಪ ಆಶೀರ್ವಾದ ಮಾಡಿದರು. ಅದುವರೆಗೆ ಇಡೀ ದೇಶದಲ್ಲಿ ಸಂತೂರು ವಾದ್ಯವನ್ನು ಗೆದ್ದ ಕಲಾವಿದರು ಯಾರೂ ಇರಲಿಲ್ಲ.

ರಕ್ತಗತವಾಗಿ ಬಂದ ಸಂಗೀತವು ಬಳುವಳಿ ಆಗಿತ್ತು. ಸತತ ಪ್ರಯತ್ನದಿಂದ ಸಂತೂರು ಅವರ ಕೈ ಹಿಡಿಯಿತು. ಮಾಧುರ್ಯದ ಅಲೆಯನ್ನು ಹುಟ್ಟು ಹಾಕಿತು. 17ನೇ ವಯಸ್ಸಿಗೆ ಮುಂಬಯಿಯಲ್ಲಿ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದ ಕಛೇರಿಯನ್ನು ನೀಡಿದಾಗ ಸೇರಿದ ಸಂಗೀತ ಪ್ರೇಮಿಗಳು ಶಹಭಾಶ್ ಅಂದರು. 1956ರ ಶಾಂತಾರಾಮ್ ನಿರ್ದೇಶನದ ಝನಕ್ ಝನಕ್ ಪಾಯಲ್ ಬಾಜೆ ಸಿನೆಮಾದಲ್ಲಿ ಒಂದು ದೃಶ್ಯಕ್ಕೆ ಹಿನ್ನೆಲೆ ಸಂಗೀತ ಒದಗಿಸುವ ಅವಕಾಶ ದೊರೆಯಿತು. ಅದು ಕೂಡ ಸೂಪರ್ ಹಿಟ್ ಆಯಿತು.
ಅದೇ ಹೊತ್ತಿಗೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಕೊಳಲು ವಾದಕ ಹರಿಪ್ರಸಾದ್ ಚೌರಾಸಿಯಾ, ಗಿಟಾರ್ ವಾದಕ ಬ್ರಿಜ್‌ಭೂಷಣ್‌ ಕಬ್ರಾ ಅವರ ಗೆಳೆತನ ದೊರಕಿತು. ಅವರು ಮೂವರೂ ಸೇರಿ Call Of The Valley ಎಂಬ ಹೆಸರಿನ ಒಂದು ಆಲ್ಬಂ ಹೊರತಂದರು. ಅದು ಸೂಪರ್ ಹಿಟ್ ಆಯಿತು ಮತ್ತು ಪ್ಲಾಟಿನಂ ಡಿಸ್ಕ್ ಪಡೆಯಿತು. ಪಂಡಿತ್ ಶಿವಕುಮಾರ್ ಶರ್ಮಾ ಗಾಯಕಿ, ಗತ್ಕಾರಿ ಮತ್ತು ಲಯಕಾರಿ ಎಲ್ಲದರಲ್ಲೂ ಗೆದ್ದರು.































 
 

ಮುಂದೆ ಶಿವಕುಮಾರ್ ಶರ್ಮಾ ಮತ್ತು ಹರಿಪ್ರಸಾದ್ ಚೌರಾಸಿಯಾ ಸೇರಿ ಹಲವು ಹಿಂದಿ ಸಿನೆಮಾಗಳಿಗೆ ‘ಶಿವ್-ಹರಿ’ ಎಂಬ ಹೆಸರಿನಲ್ಲಿ ಸಂಗೀತ ನಿರ್ದೇಶನ ಮಾಡಿದರು. ಸಿಲ್‌ಸಿಲಾ, ಫಾಸಲೆ, ಢರ್, ಚಾಂದಿನಿ, ಲಮ್ಹೆ ಮೊದಲಾದ ಸಿನೆಮಾಗಳಿಗೆ ಶಿವ್-ಹರಿ ಅವರ ಸಂಗೀತ ನಿರ್ದೇಶನ ಇದ್ದು ಅವೆಲ್ಲವೂ ಭಾರಿ ಹಿಟ್ ಆಗಿವೆ. ಸಿಲ್‌ಸಿಲಾ ಹಿಂದಿ ಸಿನೆಮಾದ ಹಾಡುಗಳಿಗೆ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಬಂದಿತು. ಉಸ್ತಾದ್ ಬಿಸ್ಮಿಲ್ಲಾ ಖಾನ್, ಉಸ್ತಾದ ವಿಲಾಯತ್ ಖಾನ್, ಝಾಕೀರ್ ಹುಸೇನ್, ಅಲ್ಲಾರಖಾ, ಹರಿಪ್ರಸಾದ್ ಚೌರಾಸಿಯಾ ಅವರೊಂದಿಗೆ ಶಿವಕುಮಾರ್ ಶರ್ಮಾ ಅವರ ಜುಗಲಬಂದಿ ಕಾರ್ಯಕ್ರಮಗಳ ವಿಡಿಯೋಗಳನ್ನು ಯು ಟ್ಯೂಬ್ ವೇದಿಕೆಯಲ್ಲಿ ನೋಡಿದಾಗ ರೋಮಾಂಚನ ಆಗುತ್ತದೆ. ಸಂಗೀತದ ದೈವಿಕ ಸ್ಪರ್ಶಕ್ಕೆ ನಾವು ನಮಗೆ ಅರಿವಿಲ್ಲದಂತೆ ಒಳಗಾಗುತ್ತೇವೆ.

ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯ ಗೌರವ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು ದೊರೆತಿವೆ. ಅಮೆರಿಕದ ಬಾಲ್ಟಿಮೋರ್ ಎಂಬ ಪ್ರಾಂತ್ಯವು ಅವರಿಗೆ ಗೌರವ ಸಿಟಿಜನ್‌ಶಿಪ್ ನೀಡಿದೆ. ಭಾರತದ ಎಲ್ಲಾ ರಾಷ್ಟ್ರೀಯ ಸಂಗೀತ ಮಹೋತ್ಸವಗಳ ವೇದಿಕೆಯಲ್ಲಿ ಶರ್ಮಾ ಅವರ ಸಂಗೀತ ಕಛೇರಿ ಇರುತ್ತಿತ್ತು ಮತ್ತು ಅದು ಸ್ಟಾರ್ ಆಕರ್ಷಣೆ ಆಗಿರುತಿತ್ತು.
ನೂರಾರು ದೇಶಗಳ ಸಂಗೀತದ ವೇದಿಕೆಗಳಲ್ಲಿ ಅವರ ಸಂತೂರ್ ಮಾಧುರ್ಯವನ್ನು ಕೇಳುವುದೇ ಚಂದ. ಅವರಿಗೆ ಅಮೆರಿಕ, ಫ್ರಾನ್ಸ್, ಇಟಲಿ, ಜರ್ಮನಿ, ಲಂಡನ್ ಮೊದಲಾದ ಕಡೆ ಸಾವಿರಾರು ಅಭಿಮಾನಿಗಳು ಇದ್ದಾರೆ.”ಸಂಗೀತವು ಕೇವಲ ಮನೋರಂಜನೆಗಾಗಿ ಅಲ್ಲ. ಅದು ಒಂದು ದಿವ್ಯವಾದ ಆರಾಧನೆ. ನನ್ನ ಸಂಗೀತ ಕಚೇರಿಯಲ್ಲಿ ಕುಳಿತು ಸಂಗೀತ ಆಲಿಸುವ ಶ್ರೋತೃಗಳು ಆಧ್ಯಾತ್ಮಿಕ ಸ್ಪರ್ಶಕ್ಕೆ ಒಳಗಾದರೆ ಮಾತ್ರವೆ ನನಗೆ ಸಮಾಧಾನ” ಎಂದಿದ್ದಾರೆ ಶರ್ಮಾ.

ಇಂದು (ಜನವರಿ 13) ಅವರ ಹುಟ್ಟಿದ ಹಬ್ಬ. ಕಳೆದ ವರ್ಷ ಮೇ 10ರಂದು ಅವರು ವಿಧಿವಶರಾದದ್ದು ಸಂಗೀತಪ್ರಿಯರಿಗೆ ತುಂಬಲಾಗದ ನಷ್ಟ ಆಗಿದೆ. ಅವರ ಕೈಯಲ್ಲಿ ಹಿತವಾಗಿ ತಬ್ಬಿಕೊಂಡು ಕೂತಿರುತ್ತಿದ್ದ ಸಂತೂರ್ ವಾದ್ಯ ಮತ್ತು ಆದರ ಎಣೆ ಇಲ್ಲದ ಮಾಧುರ್ಯಕ್ಕೆ ಶರಣಾಗಿ ಪಂಡಿತ್‌ಜಿಯವರಿಗೆ ಒಂದು ಹನಿ ಕಣ್ಣೀರು ಸುರಿಸಿ ಶ್ರದ್ಧಾಂಜಲಿ ಕೊಡೋಣ ಅಲ್ಲವೇ?
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top