ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ‘ಹಿಂದುತ್ವ-ರಾಷ್ಟ್ರೀಯತೆ’ಯ ಸಂಕಲ್ಪದೊಂದಿಗೆ ವಿವೇಕಾನಂದ ಜಯಂತಿ ಆಚರಣೆ

ಪುತ್ತೂರು: ಶರೀರ ಬುದ್ಧಿ ಮತ್ತು ಆತ್ಮದ ಜೀವಂತಿಕೆ ಇರುವುದು ನಮ್ಮ ಸಂಪ್ರದಾಯದ ಪಾಲನೆಯಲ್ಲಿ. ನಾವು ಯೋಗ್ಯತೆಯಲ್ಲಿ ಹಿಂದುಗಳಾಗಬೇಕು. ನಮ್ಮ ಸಾಂಪ್ರದಾಯಿಕ ಪರಂಪರೆಯ ಬಗ್ಗೆ ಸುಂದರ ಪರಿಕಲ್ಪನೆ ಇರಬೇಕು. ಉದಾತ್ತ ಚಿಂತನೆಗಳ ಜೊತೆ ಬದುಕಬೇಕು. ಬದುಕಿನ ಓಘ ಮತ್ತು ಶೈಲಿ ಯೋಗ್ಯವಾಗಿದ್ದಾಗ ಕನಸು ಕಾಣಲು ಅರ್ಹರಾಗಿರುತ್ತೇವೆ ಎಂದು ಕೇಂದ್ರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಮಾಜಿ ಸಚಿವ ಹಾಗೂ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ‘ಹಿಂದುತ್ವ- ರಾಷ್ಟೀಯತೆ’ ಎಂಬ ಸಂಕಲ್ಪದೊಂದಿಗೆ ಕಾಲೇಜಿನ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವಿವೇಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಗತ್ತಿನ ಶ್ರೇಷ್ಠ ವಿಚಾರಗಳನ್ನು ಸ್ವಾಗತಿಸುವ ಸಂಪ್ರದಾಯ ಹಿಂದು ಧರ್ಮದ್ದು. ಇಲ್ಲಿ ನಾವು ಸತ್ಯದ ಇತಿಹಾಸಕ್ಕೆ ಬೆಲೆ ಕೊಡುತ್ತೇವೆ. ಅದಕ್ಕಾಗಿ ಬದುಕಿನಲ್ಲಿ ಉದಾತ್ತ ಚಿಂತನೆಗಳನ್ನು ಪಾಲಿಸಿಕೊಂಡು ದೇಶ ಧರ್ಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಮಹಾಪುರುಷರ ಹುಟ್ಟನ್ನು ಸ್ಮೃತಿಯಲ್ಲಿ ಇಟ್ಟುಕೊಂಡು ಆ ದಿನವನ್ನು ವಿಶೇಷವಾಗಿ ಆಚರಿಸುತ್ತೇವೆ. ಹಿಂದುತ್ವವನ್ನು ನಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕು ಎಂದರು.































 
 

ವಿವೇಕಾನಂದರು ಭವ್ಯತೆಯನ್ನು ಬದುಕಿನಲ್ಲಿ ನಿರ್ಮಾಣ ಮಾಡಿಕೊಂಡವರು. ಓಜಸ್ವಿಯಾದಂತಹ ಶಬ್ದಗಳಿಗೆ ಅನುಸಾರವಾಗಿ ಬದುಕಿದವರು. ಆದ್ದರಿಂದಲೇ ಜಗತ್ತು ಅವರನ್ನು ಸ್ವೀಕರಿಸಿತು. ಅವರ ವೈಚಾರಿಕತೆ, ಬುದ್ಧಿಮತ್ತೆಯನ್ನು ಜಗತ್ತು ಪಾಲನೆ ಮಾಡಲು ತೊಡಗಿತು.
ವಿವೇಕಾನಂದರ ಬದುಕು ಯುವ ಸಮುದಾಯಕ್ಕೆ ದಾರಿ ದೀಪ. ಭಾರತೀಯರಾದ ನಾವು ಜಗತ್ತಿನ ನಿರೀಕ್ಷಣೆಗೆ ತಕ್ಕಂತೆ ತ್ರಿವಿಕ್ರಮನಂತೆ ಬೆಳೆದು ನಿಲ್ಲಬೇಕು. ಪೂರಕವಾದ ಸುಶಿಕ್ಷಿತ ಸಮಾಜದ ನಿರ್ಮಾಣ ಮಾಡುವ ಅದ್ಭುತ ಹೊಣೆಗಾರಿಕೆ ನಮ್ಮೆಲ್ಲರದು. ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಶ್ರಮಿಸಬೇಕು. ಕೌಶಲ್ಯಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸ್ವಉದ್ಯೋಗಿಗಳಾಗುವಂತೆ ಮತ್ತು ಶಿಷ್ಯ ವೃಂದವನ್ನು ಆಕಾಶದೆತ್ತರಕ್ಕೆ ಬೆಳೆದು ನಿಲ್ಲುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.

ನಮ್ಮಲ್ಲಿ ಅನೇಕ ಮಹಾಪುರುಷರ ಜಯಂತಿ ಆಚರಿಸಲಾಗುತ್ತಿದೆ. ಸಾವಿರಾರು ವರ್ಷಗಳ ಹಿಂದೆ ಬಾಳಿ ಸಾಧಿಸಿದ ಸಾಧಕರನ್ನ ನಾವು ಇಂದಿಗೂ ನೆನಪಿಸಿಕೊಳ್ಳುತ್ತೇವೆ. ತಮ್ಮ ಬದುಕನ್ನು ದೇಶಕ್ಕೆ ಸಮರ್ಪಿಸಿದವರನ್ನ ಮಾತ್ರ ನಾವು ಸದಾ ಸ್ಮರಿಸುತ್ತೇವೆ. ನಾವು ಬದುಕಿರುವ ರೀತಿ, ಶೈಲಿಯನ್ನು ನೋಡಿ ನಮ್ಮನ್ನು ಸ್ಪೂರ್ತಿಯಾಗಿ ಸ್ವೀಕರಿಸುವಂತಹ ವ್ಯಕ್ತಿತ್ವ ನಮ್ಮದಾದರೆ ಕಾಲದ ತಡೆಯಿಲ್ಲದೆ ಅನಂತ ವ್ಯಕ್ತಿತ್ವಗಳಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ಭಾರತೀಯರೆಂಬ ಗರ್ವ ಇರಲಿ: ಡಾ. ಕಲ್ಲಡ್ಕ ಪ್ರಭಾಕರ ಭಟ್

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ಸನಾತನ ಧರ್ಮ ಪರಂಪರೆಗೆ ಸೇರಿದವನೆಂಬ ಗರ್ವ ಭಾರತೀಯರಿಗಿರಬೇಕು. ವಿಶ್ವ ನಿರೀಕ್ಷಿಸುತ್ತಿರುವ ಶಾಂತಿಯನ್ನು ನೀಡುವವರು ಭಾರತೀಯರು ಮಾತ್ರ. ವ್ಯಕ್ತಿಗಳಂತೆ ದೇಶಕ್ಕೂ ಉಸಿರಿದೆ. ಭಾರತದ ಆತ್ಮವೆಂದರೆ ಅದು ಹಿಂದೂ ಧರ್ಮ. ಧರ್ಮವಿದ್ದರೆ ಮಾತ್ರ ಭಾರತ ಉಳಿಯುತ್ತದೆ. ಭಾರತ ಧರ್ಮದ ಹಾದಿಯಲ್ಲಿ ಸಾಗಬೇಕು. ವಿವೇಕಾನಂದರದು ದಾರ್ಶನಿಕ ವ್ಯಕ್ತಿತ್ವ. ತಪ್ಪು ಚರಿತ್ರೆ ಮತ್ತು ಗುಲಾಮಿ ಮಾನಸಿಕತೆಯಿಂದ ಹೊರಬರಬೇಕು ಹಾಗೂ ಸ್ವದೇಶಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ ಧರ್ಮದ ಪರಿಪಾಲನೆಯಾಗಬೇಕು ಎಂದರು.

ಈ ಸಂದರ್ಭದಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ .ಕೆ. ಎಂ ಕೃಷ್ಣ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಪಿ ಸತೀಶ್ ರಾವ್ ವಂದಿಸಿದರು. ವಿವೇಕಾನಂದ ಪದವಿ ಪೂರ್ವ ಗಣಿತ ಶಾಸ್ತ್ರ ವಿಭಾಗದ ಉಪನ್ಯಾಸಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು.

ವಿವೇಕಾನಂದರ ವೇಷ ಧರಿಸಿದ ನಿವೇದಿತ ಶಿಶು ಮಂದಿರದ ಮಕ್ಕಳಿಂದ ವಿವೇಕ ವಾಣಿ ವಾಚನ ನಡೆಯಿತು.ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಗಳ ಆರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಂತೆಯೇ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಅದ್ಧೂರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ವಿನೂತನ ಅನಾವರಣ
ಇದೇ ಸಂದರ್ಭದಲ್ಲಿ ವಿವೇಕಾನಂದ ಸ್ವಾಯತ್ತ ಕಾಲೇಜಿನ ಪದವಿ ಪತಿಕೋದ್ಯಮ ವಿದ್ಯಾರ್ಥಿಗಳ ‘ವಿಕಸನ’ ಪತ್ರಿಕೆ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪಾಕ್ಷಿಕ ‘ವಿನೂತನ’ ವಿವೇಕಾನಂದ ಜಯಂತಿ ವಿಶೇಷ ಸಂಚಿಕೆಗಳನ್ನು ಅನಾವರಣಗೊಳಿಸಲಾಯಿತು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top