ಶಂಕಿತ ಉಗ್ರ ಶಾರಿಕ್ ಕುಟುಂಬಕ್ಕೆ ಸೇರಿದ ಕಟ್ಟದಲ್ಲಿದೆ ಕಾಂಗ್ರೆಸ್ ಕಚೇರಿ
ಶಿವಮೊಗ್ಗ: ತೀರ್ಥಹಳ್ಳಿಯಲ್ಲಿರುವ ಕಾಂಗ್ರೆಸ್ ಕಚೇರಿ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನ ಮಾಜಿ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಮಹಮ್ಮದ್ ಶಾರೀಕ್ ಕುಟುಂಬದ ಆಸ್ತಿಯನ್ನು ಕಾಂಗ್ರೆಸ್ ಲೀಸ್‌ಗೆ ಪಡೆದಿರುವ ಕುರಿತು ವಿಚಾರಣೆ ನಡೆಸಲಾಗಿದೆ.
ತೀರ್ಥಹಳ್ಳಿ ಪಟ್ಟಣದಲ್ಲಿರುವ ಕಾಂಗ್ರೆಸ್ ಕಚೇರಿ ಹಾಗೂ ಅದರ ಮೇಲೆ ಇರುವ ಬಾಡಿಗೆ ಕಟ್ಟಡ ಶಾರಿಕ್ ಕುಟುಂಬಕ್ಕೆ ಸಂಬಂಧಿಸಿದೆ. ಹೀಗಾಗಿ ಬಾಡಿಗೆದಾರರೊಂದಿಗಿನ ಕರಾರು ಪತ್ರಗಳನ್ನು ಎನ್‌ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಈ ಕಟ್ಟಡವನ್ನು ಕಾಂಗ್ರೆಸ್ 2015ರಲ್ಲಿ 8 ವರ್ಷಗಳ ಅವಧಿಗೆ 10 ಲಕ್ಷ ರೂ. ಮೊತ್ತಕ್ಕೆ ಲೀಸ್‌ಗೆ ಪಡೆದಿತ್ತು. ಕಿಮ್ಮನೆ ರತ್ನಾಕರ್ ಸಹೋದರನ ಪುತ್ರ ನವೀನ್ ಹೆಸರಿನಲ್ಲಿ ಲೀಸ್‌ಗೆ ಪಡೆಯಲಾಗಿತ್ತು. ಪ್ರತಿ ತಿಂಗಳು 10 ಸಾವಿರ ರೂ. ಬಾಡಿಗೆಯಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದದಂತೆ ಪ್ರತಿ ತಿಂಗಳು ಶಾರೀಖ್ ಕುಟುಂಬದ ಬ್ಯಾಂಕ್ ಖಾತೆಗೆ 10 ಸಾವಿರ ರೂ. ಜಮಾ ಮಾಡಲಾಗುತ್ತಿತ್ತು. 2023ರ ಜೂನ್ ತಿಂಗಳಿನಲ್ಲಿ ಈ ಒಪ್ಪಂದ ಅಂತ್ಯವಾಗಲಿದ್ದು, 10 ಲಕ್ಷ ರೂ. ಅಡ್ವಾನ್ಸ್ ನೀಡಲು ಕೋರಲಾಗಿತ್ತು. ಅಡ್ವಾನ್ಸ್ ಹಣವನ್ನು ವಾಪಸ್ ನೀಡಿದರೆ ಕಚೇರಿ ಖಾಲಿ ಮಾಡುವುದಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಮ್ಮನೆ ರತ್ನಾಕರ್, ನನ್ನ ಮನೆಯ ಮೇಲೆ ಇಡಿ ದಾಳಿಯಾಗಿದೆ ಎಂದು ಬಿಜೆಪಿ ಸುಳ್ಳು ಪ್ರಚಾರ ಮಾಡಿದೆ. ಮನೆ ಪರಿಶೀಲನೆ ನಡೆಸಿದರೆ 10 ಸಾವಿರ ರೂಪಾಯಿ ಕೂಡ ಸಿಗುವುದಿಲ್ಲ. ಬಾಡಿಗೆ ವಿಚಾರವಾಗಿ ಮಾಹಿತಿ ಪಡೆಯಲು ಕಾಂಗ್ರೆಸ್ ಕಚೇರಿಗೆ ಎನ್‌ಐಎ ಅಧಿಕಾರಿಗಳು ಭೇಟಿ ನೀಡಿದ್ದರು. ದಾಖಲೆಗಳನ್ನು ಪಡೆಯಲು ಇಡಿ ಅಧಿಕಾರಿಗಳು ಸಹ ಆಗಮಿಸಿದ್ದರು. ಬಿಜೆಪಿಯ ಸುಳ್ಳುಗಳಿಗೆ ದೃಶ್ಯ ಮಾಧ್ಯಮ ಪೂರಕವಾಗಿ ಸುದ್ದಿ ಬಿತ್ತರಿಸಿದೆ. ದೇಶ ಮತ್ತು ನಾಡು ಶಾಂತಿಯಿಂದ ಇರಲಿ. ಕಾಂಗ್ರೆಸ್‌ಗೂ ಶಾರಿಕ್ ಕುಟುಂಬಕ್ಕೂ ಸಂಬಂಧ ಇಲ್ಲ. ಎನ್‌ಐಎ ಕಚೇರಿ ಬಾಡಿಗೆಯ ಕುರಿತು ಮಾಹಿತಿ ಕೇಳಿದ್ದು, ಅದನ್ನು ಪೂರೈಸಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್‌ನ (ಐಎಸ್) ಭಯೋತ್ಪಾದಕ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲು ಆರೋಪಿಗಳು ರೂಪಿಸಿದ ಸಂಚಿಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಮಜಿನ್ ಅಬ್ದುಲ್ ರಹಮಾನ್ ಮತ್ತು ದಾವಣಗೆರೆ ನದೀಮ್ ಅಹ್ಮದ್ ಎಂದು ಗುರುತಿಸಲಾದ ಇಬ್ಬರು ಐಸಿಸ್ ಕಾರ್ಯಕರ್ತರನ್ನು ಎನ್‌ಐಎ ಬಂಧಿಸಿದೆ.
ಇಬ್ಬರು ಶಂಕಿತರ ಸೆರೆ
2022ರ ಸೆಪ್ಟೆಂಬರ್ 19 ರಂದು ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಸಿದ್ದ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನವೆಂಬರ್ 4 ರಂದು ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸಲಾಗಿತ್ತು. ಪ್ರಕರಣದಲ್ಲಿ ಇತರ ನಾಲ್ವರು ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು. ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿರುವ ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ನ ಅಜ್ಜಿ ಮನೆ ಸೇರಿದಂತೆ ಮೂರು ಮನೆಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳುಶೋಧ ಕಾರ್ಯಾಚರಣೆ ನಡೆಸಿದ್ದಾರೆ.