ನವದೆಹಲಿ : ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಕೇಂದ್ರದಿಂದ ಹೆಚ್ಚುವರಿ 2500ಕೆಎಲ್ ಸೀಮೆ ಎಣ್ಣೆ ಬಿಡುಗಡೆ ಮತ್ತು 2022-23ನೇ ಸಾಲಿನ ಹಂಚಿಕೆಗಿಂತಲೂ ಹೆಚ್ಚುವರಿ ಸೌಲಭ್ಯವನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಿದೆ. ಕೇಂದ್ರ ಸರಕಾರದ ಪೆಟ್ರೋಲಿಯಂ ಸಚಿವಾಲಯ ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮಿನುಗಾರರಿಗೆ ಒಟ್ಟು 5472 ಕೆ.ಎಲ್. ಸೀಮೆ ಎಣ್ಣೆಯನ್ನು ಹಂಚಿಕೆ ಮಾಡಿತ್ತು. ಅದರಂತೆ ಹಂತಹಂತವಾಗಿ ರಾಜ್ಯದ ಮೀನುಗಾರರ ಸೌಲಭ್ಯಕ್ಕಾಗಿ 2472ಕೆಎಲ್ ಜೊತೆಗೆ 3000ಕೆಎಲ್ ಸೀಮೆ ಎಣ್ಣೆಯನ್ನು ಬಿಡುಗೊಡೆಗೊಳಿಸಿತ್ತು. ಜ.12ರಂದು ಪೆಟ್ರೋಲಿಯಂ ಸಚಿವಾಲಯ ಹಂಚಿಕೆಗಿಂತಲೂ ಹೆಚ್ಚುವರಿಯಾಗಿ 2500 ಕೆ.ಎಲ್. ಸೀಮೆ ಎಣ್ಣೆಯನ್ನು ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸೌಲಭ್ಯಕ್ಕಾಗಿ ಬಿಡುಗಡೆಗೊಳಿಸಿ ಆದೇಶ ಮಾಡಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆಯವರು ತಿಳಿಸಿದ್ದಾರೆ.
ಕೇಂದ್ರ ಸರಕಾರ 2022-23ನೇ ಸಾಲಿನ ಅವಧಿಯ ಹಂಚಿಕೆಗಿಂತಲೂ ಹೆಚ್ಚಿನ ಪ್ರಮಾಣದ ಸೀಮೆ ಎಣ್ಣೆಯನ್ನು ರಾಜ್ಯದ ಮೀನುಗಾರರಿಗೆ ಬಿಡುಗಡೆಗೊಳಿಸಿದೆ. ಒಟ್ಟಾರೆಯಾಗಿ 7972 ಕೆ.ಎಲ್. ಸೀಮೆ ಎಣ್ಣೆ ಹಂಚಿಕೆಯನ್ನು ರಾಜ್ಯದ ಕರಾವಳಿ ಮೀನುಗಾರರು ಕೇಂದ್ರದಿಂದ ಪಡೆದುಕೊಂಡಿದ್ದಾರೆ. ಕರಾವಳಿ ಪ್ರದೇಶದ ಮೀನುಗಾರರ ಅಗತ್ಯಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಸ್ಪಂದನೆಯನ್ನು ನೀಡಿದೆ. ಕರಾವಳಿ ಪ್ರದೇಶದ ಜೀವನಾಧಾರವಾದ ಮೀನುಗಾರಿಕೆಯನ್ನೆ ಬಹುಪಾಲು ಜನರು ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಆದ್ದರಿಂದ ಕರಾವಳಿ ಪ್ರದೇಶದ ಸಾಂಪ್ರದಾಯಿಕ ಮೀನುಗಾರರ ಮನವಿಯನ್ನು ಪರಿಗಣಿಸಬೇಕೆಂದು ಈ ಬಗ್ಗೆ ಕೇಂದ್ರ ಸರಕಾರದ ಪೆಟ್ರೋಲಿಯಂ ಸಚಿವರಲ್ಲಿ ಮನವಿಯಲ್ಲಿ ಮಾಡಲಾಗಿತ್ತು. ಅದರಂತೆ ಕೇಂದ್ರದ ಪೆಟ್ರೋಲಿಯಂ ಸಚಿವರಾದ ಶ್ರಿ ಹರದೀಪ ಸಿಂಗ್ ಪುರಿಯವರು ಮನವಿಗೆ ಸ್ಪಂದಿಸಿ, ಮೀನುಗಾರರ ಬೇಡಿಕೆಯನ್ನು ಈಡೇರಿಸಿದ್ದಾರೆ.
ಹರದೀಪ ಸಿಂಗ್ ಪುರಿಯವರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯದ ಕರಾವಳಿ ಪ್ರದೇಶದ ಸಮಸ್ತ ಮೀನುಗಾರರ ಪರವಾಗಿ ಧನ್ಯವಾದಗಳನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಸಲ್ಲಿಸಿದ್ದಾರೆ. ನಾಡಿನ ಸಮಸ್ತ ಮೀನುಗಾರರ ಪರವಾಗಿ ನರೇಂದ್ರ ಮೋದಿ ನೇತೃತ್ವದ ಸರಕಾರ ಸದಾ ತಮ್ಮೊಂದಿಗೆ ಇದೆ. ಕೇಂದ್ರ ಸರಕಾರ ನೀಡಿದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿರೆಂದು ಕೇಂದ್ರ ಸಚಿವೆ ಮೀನುಗಾರರಲ್ಲಿ ಮನವಿ ಮಾಡಿದ್ದಾರೆ.