ಚುನಾವಣೆ ದೃಷ್ಟಿಯ ಯೋಜನೆ ನಿರೀಕ್ಷೆ
ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್ ಫೆ.17ರಂದು ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಿದ್ಧತೆಗಳನ್ನು ಆರಂಭಿಸಿದ್ದಾರೆ.
ಬಜೆಟ್ಗೆ ಸಿದ್ಧತೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಕಲಬುರ್ಗಿಗೆ ಭೇಟಿ ನೀಡಿದ ಮರುದಿನ ಅಂದರೆ ಜ.20 ರಿಂದ ಇಲಾಖಾ ಮುಖ್ಯಸ್ಥರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಣಿ ಸಭೆ ನಡೆಸಲಿದ್ದಾರೆ.
ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗಲೇ ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಲು ಮುಂದಾಗಿದ್ದು, ಇದು ಪ್ರಸ್ತುತ ಸರ್ಕಾರ ಕೊನೆಯ ಬಜೆಟ್. ಹೀಗಾಗಿ ಮತದಾರರನ್ನು ಓಲೈಸಲು ಮುಖ್ಯಮಂತ್ರಿಗಳು ಹಲವು ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ.
ಬೊಮ್ಮಾಯಿ ಅವರು ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ನೀರಾವರಿ ಯೋಜನೆಗಳತ್ತ ಹೆಚ್ಚಿನ ಗಮನ ಹರಿಸುವ, ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಯೋಜನೆಗಳನ್ನು ಅವರು ಘೋಷಿಸುವ ನಿರೀಕ್ಷೆಯಿದೆ.
ಬಜೆಟ್ನ ಪ್ರಾಥಮಿಕ ಸುತ್ತಿನ ಸಭೆಗಳು ಈಗಾಗಲೇ ಮುಗಿದಿವೆ. ಕೋವಿಡ್ ನಂತರದ, ಅಬಕಾರಿ ಇಲಾಖೆ ಸೇರಿದಂತೆ ತೆರಿಗೆ ಸಂಗ್ರಹಣೆಗಳು ಗಮನಾರ್ಹವಾಗಿ ಹೆಚ್ಚಾದ ಕಾರಣ, ಬೊಮ್ಮಾಯಿ ಅವರು ಈ ಬಾರಿ ಅನೇಕ ಹೊಸ ಯೋಜನೆಗಳನ್ನು ಘೋಷಿಸಲಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಗಾತ್ರವು ದೊಡ್ಡದಾಗಿರಲಿದೆ ಎಂದು ಹೇಳಲಾಗುತ್ತಿದೆ.