ಪುತ್ತೂರು: ಮೌಲ್ಯಾಂಕನ ಹಾಗೂ ಶ್ರೇಣೀಕರಣಕ್ಕಾಗಿ ಸಂತ ಫಿಲೋಮಿನಾ ಕಾಲೇಜು ಕಳೆದ ಸಪ್ಟೆಂಬರ್ ತಿಂಗಳಲ್ಲಿ ನ್ಯಾಕ್ ಸಂಸ್ಥೆಗೆ ಸಲ್ಲಿಸಿದ ಸ್ವ-ಅಧ್ಯಯನ ವರದಿಯ ಮೌಲ್ಯಮಾಪನಕ್ಕಾಗಿ ನ್ಯಾಕ್ ಸಂಸ್ಥೆಯಿಂದ ನಿಯೋಜಿಸಲ್ಪಟ್ಟ ತ್ರಿ-ಸದಸ್ಯ ತಂಡವೊಂದು ಜನವರಿ ೪ ಮತ್ತು ೫ರಂದು ಕಾಲೇಜಿಗೆ ಭೇಟಿ ನೀಡಿತು.
ತಂಡದ ಅಧ್ಯಕ್ಷರಾದ ಉತ್ತರ ಪ್ರದೇಶದ ಮಹರ್ಷಿ ಮಾಹಿತಿ ತಂತ್ರಜ್ಞಾನ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳೂ ಹಾಗೂ ಪ್ರಸ್ತುತ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರೂ ಆದ ಡಾ| ಹೆಚ್.ಕೆ. ಸಿಂಗ್, ಸದಸ್ಯ ಸಂಯೋಜಕ ಹರಿಯಾಣದ ಕುರುಕ್ಷೇತ್ರ ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ| ಪವನ್ ಕುಮಾರ್ ಶರ್ಮ, ಸದಸ್ಯರಾದ ಸೋಲಾಪುರ ವಾಲ್‌ಚಂದ್ ಕಲಾ ಮತ್ತು ವಿಜ್ಞಾನ ಸ್ವಾಯತ್ತ ಕಾಲೇಜು ಪ್ರಾಂಶುಪಾಲ ಡಾ| ಸಂತೋಶ್ ಕೋಠಿ ಇವರನ್ನು ಕಾಲೇಜಿನ ಎನ್‌ಸಿಸಿ ಆರ್ಮಿ ಮತ್ತು ನೇವಿಯ ಸದಸ್ಯರ ಗೌರವವಂದನೆಯೊಂದಿಗೆ ಸ್ವಾಗತಿಸಲಾಯಿತು.
ತಂಡವು ಕಾಲೇಜಿನ ಪ್ರಾಂಶುಪಾಲರು, ಐಕ್ಯೂಎಸಿ ಸಂಯೋಜಕರು, ಆಡಳಿತ ಮಂಡಳಿಯ ಸದಸ್ಯರು, ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಆಡಳಿತ ಸಿಬ್ಬಂದಿ, ವಿದ್ಯಾರ್ಥಿಗಳು, ಹೆತ್ತವರು, ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿತು. ಕಾಲೇಜು ಸ್ವ-ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ ಹಲವಾರು ಅಂಶಗಳ ಬಗ್ಗೆ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಕಾಲೇಜಿನ ಯಕ್ಷಕಲಾ ಕೇಂದ್ರ ಹಾಗೂ ವಿದ್ಯಾರ್ಥಿ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಯಿತು.
ಜನವರಿ 5ರಂದು ಕಾಲೇಜಿನ ಹಲವಾರು ಕ್ರಿಯಾತ್ಮಕ ಘಟಕಗಳಿಗೆ ಭೇಟಿ ನೀಡಿದ ನಂತರ ಉಪನ್ಯಾಸಕರು, ಆಡಳಿತ ಸಿಬ್ಬಂದಿ, ವಿದ್ಯಾರ್ಥಿಸಂಘದ ಸದಸ್ಯರ ಸಮ್ಮುಖದಲ್ಲಿ ಕಾಲೇಜಿನ ಪ್ರಾಂಶುಪಾಲ ವಂ| ಡಾ ಆಂಟನಿ ಪ್ರಕಾಶ್ ಮೊಂತೆರೋ ಅವರಿಗೆ ತಂಡದ ಅಧ್ಯಕ್ಷ ಡಾ. ಹೆಚ್. ಕೆ.ಸಿಂಗ್ ಅವರು ನಿರ್ಗಮನ ವರದಿಯನ್ನು ಹಸ್ತಾಂತರಿಸಿದರು.
ಜನವರಿ 10ರಂದು ಸದರಿ ಮೌಲ್ಯಾಂಕನ ಪ್ರಕ್ರಿಯೆಯ ಫಲಿತಾಂಶವು ಹೊರಬಂದಿದ್ದು ಕಾಲೇಜಿಗೆ ಎ ಶ್ರೇಣಿ ದೊರಕಿರುತ್ತದೆ.
ಫಲಿತಾಂಶ ದೊರಕಿದ ಹಿನ್ನೆಲೆಯಲ್ಲಿ ಕೆಥೋಲಿಕ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ವಂ| ಬಿಷಪ್ ಪೀಟರ್ ಪಾವ್ಲ್ ಸಲ್ದಾನ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾದ ವಂ| ಆಂಟನಿ ಶೆರಾ, ಕಾಲೇಜಿನ ಸಂಚಾಲಕ ವಂ| ಜೆರೋಮ್ ಲಾರೆನ್ಸ್ ಮಸ್ಕರೇಞಸ್ ಹಾಗೂ ಆಡಳಿತ ಮಂಡಳಿ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.