ರಾಜಕೀಯ ನಾಯಕರ ಸಿಡಿ ಪ್ರಕರಣಗಳಿಗೆ ನಂಟು ಶಂಕೆ
ಬೆಂಗಳೂರು : ರಾಜಕೀಯ ನಾಯಕ ಸಿಡಿ ಕೇಸ್‌ಗೆ ನೇರ ಸಂಬಂಧ ಹೋಮದಿದ್ದಾನೆ ಎಂದು ಶಂಕಿಸಲಾಗಿರುವ ಸ್ಯಾಂಟ್ರೊ ರವಿ ಪತ್ತೆಗಾಗಿ 11 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಯಾಂಟ್ರೊ ರವಿ ವಿರುದ್ಧ ದಾಖಲಾಗಿರುವ ದೂರಿನ ತನಿಖೆ ನಡೆಸಲು ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ದೂರು ದಾಖಲಾದ ಬಳಿಕ ಸ್ಯಾಂಟ್ರೊ ರವಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರಿದಿದೆ. ಸ್ಯಾಂಟ್ರೊ ರವಿ ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾನೆ. ಕೋರ್ಟ್ ಸೋಮವಾರ ಅರ್ಜಿ ವಿಚಾರಣೆಗೆ ಒಪ್ಪಿಗೆ ನೀಡಿತು ಮತ್ತು ಅರ್ಜಿ ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿತು. ಈ ನಡುವೆ ಮೈಸೂರು ಪೊಲೀಸರು ಸ್ಯಾಂಟ್ರೊ ರವಿ ಬಂಧನಕ್ಕೆ 11 ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ.
ವಿಜಯನಗರ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಸ್ಯಾಂಟ್ರೊ ರವಿ ತಲೆಮರೆಸಿಕೊಂಡಿದ್ದಾನೆ. ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಸ್ಯಾಂಟ್ರೊ ರವಿ ಕರ್ನಾಟಕ ಬಿಟ್ಟು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರ ತಂಡ ಹೊರ ರಾಜ್ಯಗಳಲ್ಲಿ ಸಹ ಹುಡುಕಾಟ ನಡೆಸುತ್ತಿದೆ. ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಸಹ ಪೊಲೀಸರ ತಂಡ ಹುಡುಕಾಟ ಮುಂದುವರೆಸಿದೆ. ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ನೇತೃತ್ವದಲ್ಲಿ ಪೊಲೀಸರ ತಂಡಗಳು ಹುಡುಕಾಟ ನಡೆಸಿವೆ.