ಅಸಮದಲಿ ಸಮತೆಯನು ವಿಷಮದಲಿಮೆತ್ರಿಯನು|
ಅಸಮಂಜಸದಿ ಸಮನ್ವಯ ಸೂತ್ರನಯವ||
ವೆಸನಮಯ ಸಂಸಾರದಲಿ ನಿನೋದವ ಕಾಣ್ಬ
ರಸಿಕತೆಯೇ ಯೋಗವೆಲೊ- ಮಂಕುತಿಮ್ಮ||
ಅಸಮಾನತೆ ಎನ್ನುವುದು ಈ ಸೃಷ್ಟಿಯ ಸಹಜ ಗುಣ. ಇದರಲ್ಲಿ ಸಮಾನತೆಯನ್ನು ಕಾಣುವುದು, ವಿಷಮ ಅಂದರೆ ಗಂಭೀರವಾದ ಪರಿಸ್ಥಿತಿಯಲ್ಲಿಯೂ ಸ್ನೇಹ ಅಂದರೆ ಹೊಂದಾಣಿಕೆಯ ಭಾವವನ್ನು ಹೊಂದುವುದು, ಅಸಮಂಜಸ ಅಂದರೆ ಹೊಂದಾಣಿಕೆ ಇಲ್ಲದ ಕಡೆ ಸಮನ್ವಯದ ಸೂತ್ರವನ್ನು ಅನ್ವಯಿಸುವುದು, ನೋವು ಸಂಕಷ್ಟಗಳೇ ತುಂಬಿರುವ ಬದುಕಿನಲ್ಲಿ ಸಂತೋಷವನ್ನು ಕಾಣುವಂತಹ ರಸಿಕತೆಯೇ ಜೀವನದ ನಿಜವಾದ ಯೋಗವೆಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ವಿವಿಧತೆ ಎನ್ನುವುದು ಸೃಷ್ಟಿಯ ಸಹಜ ಗುಣ. ವೈವಿಧ್ಯಮಯವಾದ ಈ ಸೃಷ್ಟಿಯಲ್ಲಿ ಪ್ರಕೃತಿ ಒಂದೊಂದಕ್ಕೂ ಒಂದು ಸ್ಥಾನ ಕೊಟ್ಟಿರುತ್ತದೆ. ನಮ್ಮ ದೃಷ್ಟಿಯಲ್ಲಿ ಕೆಲವೊಂದು ಬೇಕು ಕೆಲವೊಂದು ಬೇಡ. ಆದರೆ ಸೃಷ್ಟಿಯ ದೃಷ್ಟಿಯಲ್ಲಿ ಎಲ್ಲವೂ ಬೇಕು. ಎಲ್ಲದಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತದೆ. ಆದ್ದರಿಂದ ಅಸಮಾನತೆ ಅಸಮಂಜಸ ಎನ್ನುವುದನ್ನು ಬಿಟ್ಟು ಎಲ್ಲವನ್ನೂ ಆತ್ಮಪ್ರೀತಿ ಹಾಗೂ ಸಮಾನತೆ ಹಾಗೂ ಸಮನ್ವಯತೆಯ ದೃಷ್ಟಿಯಿಂದ ನೋಡುವ ಮನೋಭಾವವನ್ನು ರೂಢಿಸಿಕೊಳ್ಳಬೇಕು.
ಲೋಕದಲ್ಲಿ ದುಃಖ, ವ್ಯಸನವೇ ಹೆಚ್ಚಾಗಿದೆ.”ಲೋಕಂ ಶೋಕಹತಂ ಚ ಸಮಸ್ತಂ” ಎನ್ನುತ್ತಾರೆ. ಸಂತೋಷ ಮತ್ತು ದುಃಖ ಎರಡೂ ಜಗದ್ವ್ಯವಸ್ಥೆಯಲ್ಲಿ ಅಗತ್ಯ ಹಾಗೂ ಅನಿವಾರ್ಯ. ಎಲ್ಲ ಸಂದರ್ಭಗಳಲ್ಲಿ ಸ್ವಾರಸ್ಯವಾದ ರಸವನ್ನು, ಸಾರವನ್ನು ಹುಡುಕಿ ತೆಗೆಯುವ ಪ್ರವೃತ್ತಿಯೇ ರಸಿಕತೆ. ಈ ಲೋಕ ಸ್ವಾರಸ್ಯದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುವುದೇ ಯೋಗ.
ಸಂಸಾರವೆನ್ನುವುದು ಸಾಂಬಾರಿನಂತೆ
ಸರಿಯಾಗಿ ಅಡುಗೆ ಮಾಡಿದರಿಲ್ಲ ಚಿಂತೆ
ಎಲ್ಲವನು ಹಾಕಿ ತಪ್ಪಿದರೆ ಉಪ್ಪು
ತಾರುಣ್ಯದಲ್ಲಿಯೇ ಬರಬಹುದು ಮುಪ್ಪು
ಎಂಬ ಕವಿವಾಣಿಯಂತೆ ಅಡುಗೆಗೆ ಸರಿಯಾಗಿ ಉಪ್ಪು ಹಾಕುವಂತೆ ಸಾಂಸಾರಿಕ ಜೀವನದಲ್ಲಿ ಸಹನೆ ಮತ್ತು ಪ್ರೀತಿಯನ್ನು ಬೆರೆಸಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ