ಪುತ್ತೂರು: ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಬೆಳಿಯೂರುಕಟ್ಟೆ ವೆಂಕಟನಗರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿ ಜಯರಾಂ ಪೂಜಾರಿ ಮಾತನಾಡಿ, ಮನೆ ಪರಿಸರ, ಸ್ನೇಹಿತರ ಒಡನಾಟ, ಸಾಮಾಜಿಕ ವ್ಯವಸ್ಥೆಯಿಂದ ದುಶ್ಚಟಕ್ಕೆ ಬಲಿಯಾಗುವುದು ಇದೆ. ಒಮ್ಮೆ ಮಾದಕ ವಸ್ತು, ಕುಡಿತದ ಚಟಕ್ಕೆ ಬಲಿಯಾದರೆ, ಮುಂದೆ ಬಹಳ ಕಷ್ಟ ಪಡಬೇಕಾಗುತ್ತದೆ. ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮದೇ ಆಗಿರುವುದರಿಂದ, ದುಶ್ಚಟಕ್ಕೆ ಬಲಿಯಾಗದೇ ಉತ್ತಮ ಜೀವನವನ್ನು ಕಂಡುಕೊಳ್ಳಿ ಎಂದರು.
ಬದುಕಿನಲ್ಲಿ ತಾಳ್ಮೆ, ಎಚ್ಚರಿಕೆ, ಭವಿಷ್ಯದ ಕನಸು, ಗುರಿಯನ್ನು ಇಟ್ಟುಕೊಳ್ಳುವುದು ಮುಖ್ಯ. ನಾವು ಸರಿಯಾಗಿದ್ದರೆ ಮಾತ್ರ ಇನ್ನೊಬ್ಬರಿಗೆ ತಿಳಿ ಹೇಳಲು ಸಾಧ್ಯ. ಇಲ್ಲದೇ ಇದ್ದರೆ, ಸಮಾಜಕ್ಕೆ ತಿಳಿ ಹೇಳಲು ಸಾಧ್ಯವಿಲ್ಲ. ದುಶ್ಚಟಕ್ಕೆ ಬಲಿಯಾದವರನ್ನು ಸರಿದಾರಿಗೆ ತರುವುದು ಎಲ್ಲರ ಜವಾಬ್ದಾರಿ. ಆದರೆ ಅವರಿಗೆ ತಿಳಿ ಹೇಳುವ ಮೊದಲು ನಾವು ಸರಿಯಾಗಿ ಇರಬೇಕಾದದ್ದು ತುಂಬಾ ಅಗತ್ಯ ಎಂದರು.
ಭವಿಷ್ಯದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಒಳ್ಳೆಯ ನಡವಳಿಕೆ ಅಳವಡಿಸಿಕೊಳ್ಳಬೇಕು. ಒಳ್ಳೆಯ ಚಾರಿತ್ರ್ಯ ಹೊಂದಬೇಕು. ವಿದ್ಯಾವಂತರಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದು ತುಂಬಾ ಮುಖ್ಯ ಎಂದರು. ಸಾಜಾ ಒಕ್ಕೂಟದ ಅಧ್ಯಕ್ಷ ನಾಗೇಶ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಹರಿಪ್ರಕಾಶ್ ಬೈಲಾಡಿ, ವಲಯದ ಮಾಜಿ ಅಧ್ಯಕ್ಷ ಅಂಬ್ರೋಸ್ ಡಿಸೋಜಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಅಶ್ವಿನಿ, ವಲಯ ಮೇಲ್ವಿಚಾರಕ ಹರೀಶ್ ಕೆ. ಬಲ್ನಾಡು, ಸೇವಾಪ್ರತಿನಿಧಿ ಆಶಾಲತಾ ಉಪಸ್ಥಿತರಿದ್ದರು.