ವಿಷಕಾರಿ ಅನಿಲ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವು
ಲಖನೌ: ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಬಿಸ್ವಾನ್ ಎಂಬಲ್ಲಿ ಚಳಿ ತಡೆಯಲು ಹಾಕಿಕೊಂಡ ಹೀಟರ್ ಒಂದಿಡೀ ಕುಟುಂಬವನ್ನು ಬಲಿತೆಗೆದುಕೊಂಡಿದೆ. ಹೀಟರ್‌ನ ವಿಷಕಾರಿ ಅನಿಲ ಸೇವಿಸಿ ಮದ್ರಸಾ ಶಿಕ್ಷಕ ಆಸಿಫ್ (32) , ಅವರ ಪತ್ನಿ ಶಗುಫ್ತಾ (30) ಮತ್ತು ಮಕ್ಕಳಾದ 3 ವರ್ಷದ ಝೈದ್ ಮತ್ತು 2 ವರ್ಷದ ಮೈರಾ ಮೃತಪಟ್ಟಿದ್ದಾರೆ.
ಶನಿವಾರ ರಾತ್ರಿ ಆಸಿಫ್ ಕುಟುಂಬ ತೀವ್ರ ಚಳಿಯನ್ನು ತಡೆಯಲು ಗ್ಯಾಸ್ ಪೆಟ್ರೋಮ್ಯಾಕ್ಸ್ ಹಚ್ಚಿ ಕೊಠಡಿಯಲ್ಲಿ ಮಲಗಿತ್ತು. ಇದರಿಂದ ಉಸಿರುಗಟ್ಟಿ ಇಡೀ ಕುಟುಂಬ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ಹಾಲಿನ ವ್ಯಾಪಾರಿ ಬಾಗಿಲು ತಟ್ಟಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ಬಗ್ಗೆ ಅನುಮಾನಗೊಂಡ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ಒಡೆದು ನೋಡಿದಾಗ ಆಸಿಫ್, ಅವರ ಪತ್ನಿ ಮತ್ತು ಮಕ್ಕಳಿಬ್ಬರ ಶವಗಳು ಒಳಗಿನ ಹಾಸಿಗೆಯ ಮೇಲೆ ಪತ್ತೆಯಾಗಿವೆ. ನಾಲ್ವರು ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ಘಟನೆಯ ಬಗ್ಗೆ ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಲ್ಲರನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಎಲ್ಲರೂ ಮೃತಪಟ್ಟಿರುವುದಾಗಿ ಘೋಷಿಸಿದರು.