ದೊಡ್ಡವರ ಸಣ್ಣತನಗಳು

ಸೆಲೆಬ್ರಿಟಿ ಸ್ಥಾನ ಪಡೆದ ನಂತರ ನಮ್ಮ ವರ್ತನೆ ಹೇಗಿರಬೇಕು?

ಈ ವ್ಯಕ್ತಿಯ ಹೆಸರು ಶಂಕರ ಮಿಶ್ರಾ. ಬಹಳ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾದ ವೇಲ್ಸ್ ಫಾರ್ಗೋ ಇದರ ಉಪಾಧ್ಯಕ್ಷ ಈತ. ತುಂಬಾ ಓದಿದವನು. ಬಹಳ ದೊಡ್ಡ ಸಂಬಳ ಇತ್ತು. ಸಾಮಾಜಿಕ ಸ್ಥಾನಮಾನ, ಗೌರವ, ಆಸ್ತಿ, ಅಂತಸ್ತು ಎಲ್ಲವೂ ಇತ್ತು.
ಅಂತಹವನು ಮೊನ್ನೆ ಮೊನ್ನೆ ಅಮೆರಿಕದಿಂದ ಭಾರತಕ್ಕೆ ಬರುತ್ತಿದ್ದ ಏರರ ಇಂಡಿಯಾ ವಿಮಾನದಲ್ಲಿ 70 ವರ್ಷದ ಮುದುಕಿಯ ಮೈ ಮೇಲೆ ಮೂತ್ರ ಮಾಡಿದ್ದಾನೆ. ಪರಿಣಾಮವಾಗಿ ಅರೆಸ್ಟ್ ಆಗಿ ಸೆರೆಮನೆ ಸೇರಿದ್ದಾನೆ. ಉದ್ಯೋಗ ಹೋಗಿದೆ. ಕಷ್ಟಪಟ್ಟು ಪಡೆದ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆ.

ಹೀಗೂ ಇದ್ದರು ಮಹಾ ಮಹಾ ವ್ಯಕ್ತಿಗಳು































 
 

ಒಬ್ಬರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಪ್ಪತ್ತರ ದಶಕದಲ್ಲಿ ಒಂದು ಪೂರ್ಣ ಅವಧಿಗೆ ಉಪರಾಷ್ಟ್ರಪತಿ ಆದವರು. ಅದೇ ಸಂದರ್ಭದಲ್ಲಿ ಒಂದು ಸಣ್ಣ ಅವಧಿಗೆ ಹಂಗಾಮಿ ರಾಷ್ಟ್ರಪತಿ ಕೂಡ ಆದವರು. ಅವರು ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸುವಾಗ ರಾಷ್ಟ್ರಪತಿ ಭವನದಿಂದ ಒಂದಿಷ್ಟು ಒಳ್ಳೆಯ ಫರ್ನೀಚರ್‌ಗಳನ್ನು ಟ್ಟಕ್ಕಲ್ಲಿ ತುಂಬಿಸಿಕೊಂಡು ಮನೆಗೆ ತಂದಿದ್ದು ಹಲವು ಪತ್ರಿಕೆಗಳಲ್ಲಿ ವರದಿ ಆಗಿತ್ತು. ಅವರು ಮತ್ತೆ ತನ್ನ ಊರಿಗೆ ಬಂದು ತನ್ನ ಜಿಲ್ಲೆಯ ಒಂದು ಸಣ್ಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹುದ್ದೆಗೆ ನೇಮಕ ಆಗಿ ಎಲ್ಲ ಸೌಲಭ್ಯಗಳನ್ನು ಪಡೆದರು.
ಇನ್ನೊಬ್ಬ ಭಾರತದ ಮಾಜಿ ಪ್ರಧಾನಿ 23 ದಿನ ಮಾತ್ರ ಅಧಿಕಾರದಲ್ಲಿ ಇದ್ದರು. ಅವರು ಸಂಸದನ್ನು ಎದುರಿಸದ ಪ್ರಧಾನಿ ಎಂಬ ಕೀರ್ತಿ (?) ಕೂಡ ಪಡೆದವರು. ಅವರು ಪ್ರಧಾನಿ ಆದ ಕೂಡಲೇ ‘ನನಗೆ ಪ್ರಧಾನಿ ಆಗುವ ಆಸೆ ಇತ್ತು. ಆಗಿಬಿಟ್ಟೆ ‘ ಎಂಬ ಬಹಿರಂಗ ಹೇಳಿಕೆಯನ್ನು ನೀಡಿ ನಗೆಪಾಟಲಿಗೆ ಗುರಿಯಾದರು.
ಕರ್ನಾಟಕದ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಅಧಿಕಾರದಲ್ಲಿ ಇದ್ದಾಗ ಹೆಣ್ಣು ಮತ್ತು ಹೆಂಡ ತನ್ನ ದೌರ್ಬಲ್ಯಗಳು ಎಂದು ಬಹಿರಂಗ ಹೇಳಿಕೆ ನೀಡಿದ್ದರು.
ಕನ್ನಡದ ಒಬ್ಬ ಪ್ರಸಿದ್ಧ ಸಾಹಿತಿ, ಪತ್ರಕರ್ತ ತನ್ನನ್ನು ಯಾರೂ ಫಾಲೋ ಮಾಡುವುದು ಬೇಡ. ಹೆಣ್ಣು, ಸಿಗರೇಟು ಮತ್ತು ಹೆಂಡ ನನ್ನ ದೌರ್ಬಲ್ಯಗಳು. ನನ್ನ ಬರವಣಿಗೆಯನ್ನು ಬೇಕಾದರೆ ಫಾಲೋ ಮಾಡಿ ಎಂದಿದ್ದರು. ತನಗೆ ಎರಡು ಹೆಂಡತಿಯರು ಎಂದು ಬಹಿರಂಗವಾಗಿ ಹೇಳಿದ್ದರು ಮತ್ತು ತನ್ನ ಕೃತಿಯಲ್ಲಿ ಅದನ್ನು ದಾಖಲಿಸಿದ್ದಾರೆ.

ಸೆಲೆಬ್ರಿಟಿ ಆದಾಗ ಎದುರಿಸುವ ಅಪಾಯಗಳು

ನಾವು ಸಾಮಾನ್ಯ ವ್ಯಕ್ತಿ ಆಗಿದ್ದಾಗ ನಮ್ಮನ್ನು ಯಾರೂ ಗಮನಿಸುವುದಿಲ್ಲ. ಹಾಗೆಂದು ಆಗ ಕೆಟ್ಟದಾಗಿ ನಾವು ನಡೆದುಕೊಳ್ಳಬಹುದು ಎಂದು ಭಾವಿಸಬೇಡಿ. ಆದರೆ ಸೆಲೆಬ್ರಿಟಿ ಆದಾಗ ನಮಗೆ ಬಹಳ ದೊಡ್ಡ ಫ್ಯಾನ್ ಫಾಲೋವರ್‌ಗಳು ಕ್ರಿಯೇಟ್ ಆಗುತ್ತಾರೆ. ನಾವು ಬೇಡ ಅಂದರೂ ಅವರು ನಮ್ಮನ್ನು ದುರ್ಬೀನು ಹಾಕಿಕೊಂಡು ಗಮನಿಸುತ್ತಾರೆ. ಆಗ ನಮ್ಮ ಕೆಟ್ಟ ನಡವಳಿಕೆ, ವ್ಯಸನಗಳು, ಕೆಟ್ಟ ವರ್ತನೆಗಳು ಬಹಳ ದೊಡ್ಡದಾಗಿ ಕಾಣಲು ಆರಂಭ ಆಗುತ್ತವೆ. ನಮ್ಮ ವ್ಯಸನಗಳನ್ನು ಬೇರೆಯವರು ಕಾಪಿ ಮಾಡಲು ಆರಂಭ ಮಾಡುವ ಅಪಾಯ ಕೂಡ ಇರುತ್ತದೆ. ಆಗ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ. ತಮ್ಮ ವ್ಯಸನಗಳ ಕಾರಣಕ್ಕೆ ಅಧಿಕಾರ, ಸ್ಥಾನ ಮಾನ, ಸಂಪತ್ತು ಕಳೆದುಕೊಂಡ ಹಲವರಿದ್ದಾರೆ.
ಅಮೆರಿಕದಂತಹ ದೇಶದಲ್ಲಿ ಕೂಡ ಪವರ್‌ಫುಲ್ ಅಧ್ಯಕ್ಷ ಆಗಿದ್ದ ಬಿಲ್ ಕ್ಲಿಂಟನ್ ಒಂದು ಲೈಂಗಿಕ ಹಗರಣದಲ್ಲಿ ಸಿಕ್ಕಿಹಾಕಿಕೊಂಡು ಅಮೆರಿಕನ್ ಟಿವಿ ಕ್ಯಾಮೆರಾದ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡ ಘಟನೆ ನಡೆದಿತ್ತು.
ತನ್ನ ಹೆಂಡತಿಗೆ ತಲಾಕ್ ಕೊಟ್ಟು ಇನ್ನೊಬ್ಬ ಸುಂದರವಾದ ಮಾಡೆಲ್ ಹಿಂದೆ ಹೋದ ಒಬ್ಬ ಬಲಿಷ್ಠ ಕ್ರಿಕೆಟರ್ ಮೊಹಮದ್ ಅಜರುದ್ದೀನ್ ಮುಂದೆ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಆರೋಪಿ ಆಗಿ ಕ್ರಿಕೆಟ್ ತಂಡದಿಂದ ಹೊರಬೀಳುತ್ತಾರೆ. ಮುಂದೆ ಆತ ಯಾವ ಕ್ರಿಕೆಟ್ ಪಂದ್ಯ ಆಡಿದ ಉದಾಹರಣೆ ಇಲ್ಲ.

ಜನರು ನಮ್ಮ ಮಾತುಗಳಿಗಿಂತ ವರ್ತನೆಗಳನ್ನು ಹೆಚ್ಚು ಗಮನಿಸುತ್ತಾರೆ

ಒಮ್ಮೆ ನಾವು ಸೆಲೆಬ್ರಿಟಿ ಆದ ನಂತರ ಕತ್ತಲೆಯಲ್ಲಿ ಇರಲು ಸಾಧ್ಯವೇ ಇಲ್ಲ. ನಾವು ಬೇಡ ಎಂದರು ಬೆಳಕಲ್ಲಿ ಇರುತ್ತೇವೆ. ಆಗ ನಮ್ಮ ಮಾತುಗಳನ್ನು ಜನರು ಗಮನಿಸುವುದಕ್ಕಿಂತ ನಮ್ಮ ವರ್ತನೆಗಳನ್ನು ಗಮನಿಸುತ್ತಾರೆ. ಆಗ ನಮ್ಮ ಬದುಕು ನಾವು ಬೇಡ ಅಂದರೂ ತೆರೆದ ಪುಸ್ತಕ ಆಗುತ್ತದೆ. ಈ ಸಾಮಾಜಿಕ ಜಾಲತಾಣಗಳ ಪ್ರಾಬಲ್ಯದ ದಿನಗಳಲ್ಲಿ ನಾವು ಯಾವುದನ್ನೂ ಮುಚ್ಚುಮರೆ ಮಾಡಲು ಆಗುವುದಿಲ್ಲ. ಆದ್ದರಿಂದ ಅಂತಹ ಸೆಲೆಬ್ರಿಟಿಗಳು ಹೆಚ್ಚು ಎಚ್ಚರ ಆಗಿರಬೇಕು. ಮತ್ತೆ ಸಾರ್ವಜನಿಕವಾಗಿ ನಮ್ಮ ಕೆಟ್ಟ ಮಾತುಗಳು, ಕೆಟ್ಟ ವರ್ತನೆಗಳು, ದುರಭ್ಯಾಸಗಳು ಪ್ರಚಾರಕ್ಕೆ ಬಂದವು ಅಂದರೆ ನಾವು ಸೆಲೆಬ್ರಿಟಿ ಪಟ್ಟವನ್ನು ಮಾತ್ರವಲ್ಲ ಅಧಿಕಾರ, ಸ್ಥಾನ ಮಾನ, ಕೀರ್ತಿ, ಯಶಸ್ಸು ಎಲ್ಲವನ್ನೂ ಕಳೆದುಕೊಳ್ಳುತ್ತೇವೆ. ಹಾವು ಏಣಿ ಆಟದಂತೆ ಒಂದು ತಪ್ಪು ಹೆಜ್ಜೆ ನಮ್ಮನ್ನು ಪಾತಾಳಕ್ಕೆ ಎಳೆದುಕೊಂಡು ಹೋಗುವುದು ಖಂಡಿತ!
ಯೋಚನೆ ಮಾಡಿ!
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top