ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ತುಳುವೆರೆ ಮೇಳೊ ಪೂರಕ | ತುಳುವೆರೆ ಮೇಳೊ 2023ಕ್ಕೆ ಚಾಲನೆ ನೀಡಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಕಾರ್ಯಕ್ರಮವನ್ನು ಆಯೋಜಿಸುವುದು ತುಳುವಿನ ಮಾನ್ಯತೆ ಗಿಟ್ಟಿಸಿಕೊಳ್ಳಲು ಸಹಕಾರಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ಬಂಟರ ಭವನದಲ್ಲಿ ಶನಿವಾರ ನಡೆದ ಪುತ್ತೂರು ತುಳುಕೂಟದ ಸುವರ್ಣ ಮಹೋತ್ಸವ ಹಾಗೂ ತಾಲೂಕು ತುಳುವೆರೆ ಮೇಳೊ-2023 ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಕಳಸೆಗೆ ಭತ್ತ ತುಂಬುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಒಂದು ಭಾಷೆ ಸಮಾಜದ ಜನಾಂಗ, ಸಂಸ್ಕೃತಿಯನ್ನು ಬೆಸುಗೆ ಮಾಡುವ ಮಹತ್ವವನ್ನು ಪಡೆದಿದೆ. ಈ ಪೈಕಿ ತುಳುವಿನ  ಕುರಿತು ಇರುವ ಐಡೆಂಟಿಟಿ ಇಂದು ಬದಲಾವಣೆ ಆಗುವ ಸಂಗತಿ ಆಗಿದೆ. ತುಳು ಭಾಷೆಯ ಕುರಿತು ಜಗತ್ತಿಗೆ ತಿಳಿಸಲು ಇಂತಹಾ ಕಾರ್ಯಕ್ರಮ ಸಹಕಾರಿಯಾಗಿದೆ. ಈ ಮೂಲಕ ಇತರ ಭಾಷೆಯೊಂದಿಗೆ ತುಳು ಭಾಷೆಯನ್ನು ಪರಿಚಯಿಸುವ, ಉಳಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.



































 
 

ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ನಾಗಾರಾಧನೆ, ಭೂತಾರಾಧನೆ, ಕಂಬಳ ಮುಂತಾದ ಕ್ರೀಡೆಗಳು ತುಳು ಸಂಸ್ಕೃತಿಯ ಪರಿಚಯವನ್ನು ಎಲ್ಲೆಡೆ ಪಸರಿಸುತ್ತಿದೆ ಎಂದರು.

ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ತುಳುಭಾಷೆ ದ.ಕ., ಉಡುಪಿಯಲ್ಲಿ ಭಾರೀ ಪ್ರಾಮುಖ್ಯತೆ ಪಡೆದಿದೆ. ಪುತ್ತೂರಿನಲ್ಲಿ ತುಳುಕೂಟದಂತಹ ಕಾರ್ಯಕ್ರಮದ ಮೂಲಕ ಸಂಘಟನೆ ಮಾಡಲಾಗಿದೆ. ತುಳು ಭಾಷೆಯಿಂದ ಎಲ್ಲರೂ ಸಮಾಜದಲ್ಲಿ ಸಹಬಾಳ್ವೆಯಿಂದ ಬದುಕಿ ಬಾಳುವಂತಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ತುಳವೆರೆ ಮೇಳೊ ಸಮಿತಿ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ ಮಾತನಾಡಿ, ಪ್ರತಿಯೊಂದು ಭಾಷೆಗೆ ಅದರದ್ದೇ ಆದ ಸಂಸ್ಕೃತಿ, ಸಂಸ್ಕಾರ ಇದ್ದು, ತುಳು ಭಾಷೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಇಂತಹಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತುಳು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಪ್ರಯತ್ನಿಸೋಣ ಎಂದರು.

ನಗರಸಭೆ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಸಂಪ್ಯ ಅಕ್ಷಯ ಕಾಲೇಜು ನಿರ್ದೇಶಕ ಜಯಂತ ನಡುಬೈಲು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಪ್ರೇಮಲತಾ ರಾವ್, ಡಾ. ಪ್ರದೀಪ್ ಕುಮಾರ್ ಶುಭ ಹಾರೈಸಿದರು.

ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತುಳುವೆರೆ ಮೇಳೊ ಸಮಿತಿ ಕೋಶಾಧಿಕಾರಿ ರವಿಪ್ರಸಾದ್ ಬಿ.ವಿ., ಉಪಾಧ್ಯಕ್ಷೆ ಹೀರಾ ಉದಯ್, ಸಹಕಾರ್ಯದರ್ಶಿ ಉಲ್ಲಾಸ್ ಪೈ, ಸಂತೋಷ್ ಶೆಟ್ಟಿ, ನಯನಾ ರೈ ಉಪಸ್ಥಿತರಿದ್ದರು.

ಸಮಿತಿ ಕಾರ್ಯದರ್ಶಿ ಡಾ.ರಾಜೇಶ್ ಬೆಜ್ಜಂಗಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತುಳುವೆರೆ ಮೇಳೊ ಸಮಿತಿ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ವಿವಿಧ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿ ನಡೆದವು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top