ಪುತ್ತೂರು: ಟಿಪ್ಪು ನಿಜ ಕನಸುಗಳು ನಾಟಕದ 21ನೇ ಪ್ರದರ್ಶನವು ಜ. 9ರಂದು ಸಂಜೆ 6.30ರಿಂದ ಪುತ್ತೂರು ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ರಂಗ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಾಟಕ ರಚಿಸಿ, ನಿರ್ದೇಶನ ಮಾಡಿರುವ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಅವರು, ಚರಿತ್ರೆಕಾರರು ಬರೆದದ್ದೇ ಸತ್ಯ ಎಂದು ಅದನ್ನು ಪಠ್ಯವಾಗಿಸಿ ಇದೇ ಸತ್ಯ ಎಂದು ಬಿಂಬಿಸುವ ಪ್ರಯತ್ನ ನಿರಂತರವಾಗಿ ನಡೆದು ಬಂದಿತ್ತು. ಇದನ್ನು ಮೀರಿದ ಟಿಪ್ಪು ಕುರಿತ ಸತ್ಯದ ಅನಾವರಣ ಈ ನಾಟಕ ಪ್ರದರ್ಶನದ ಉದ್ದೇಶ. ನಾಟಕದ ಸೌಂದರ್ಯಕ್ಕೆ ತೊಂದರೆಯಾಗದಂತೆ ಪ್ರದರ್ಶನ ಮಾಡಲಾಗುತ್ತಿದೆ ಎಂದು ಹೇಳಿದರು.
ಶಶಿಧರ್ ಅಡಪ ರಂಗಸಜ್ಜಿಕೆ, ಪ್ರಮೋದ್ ಶಿಗ್ಗಾಲ ವಸ್ತ್ರ ಮತ್ತು ಸಲಕರಣೆ, ಧನಂಜಯ ಮತ್ತು ಸುಬ್ರಹ್ಮಣ್ಯ ಅವರ ಸಂಗೀತ, ಮಹೇಶ್ ಕಲ್ಲತ್ತಿ ಬೆಳಕು ಸಂಯೋಜನೆ ಇರುವ 40 ಮಂದಿಯ ನಾಟಕ ತಂಡವಿದೆ. ಈ ನಾಟಕ ಎಲ್ಲೆಡೆ ಸಂಚಲನ ಮೂಡಿಸಿದ್ದು, ಮುದ್ರಣಗೊಂಡ ಒಂದೂವರೆ ತಿಂಗಳಲ್ಲಿ 12ನೇ ಆವೃತ್ತಿ ಕಂಡಿದೆ ಎಂದು ಅವರು ಮಾಹಿತಿ ನೀಡಿದರು. ನಾಟಕಕ್ಕೆ 100 ರೂ. ಟಿಕೇಟ್ ನಿಗದಿಪಡಿಸಲಾಗಿದೆ. ಸುಮಾರು 750 ಸೀಟುಗಳು ರಂಗಮಂದಿರದಲ್ಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ಎನ್.ಎಂ.ಸಿ. ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ, ರಂಗಾಯನ ಅಭಿಮಾನಿ ಡಾ. ಕೃಷ್ಣ ಪ್ರಸನ್ನ, ರಂಗ ಕಲಾವಿದೆ ವಸಂತ ಲಕ್ಷ್ಮೀ ಉಪಸ್ಥಿತರಿದ್ದರು.