ಎಸ್‌ಡಿಪಿಐ ಮೇಲೂ ನಿಷೇಧದ ತೂಗುಗತ್ತಿ?

ಬೆಂಗಳೂರು ಗಲಭೆ ಹಿನ್ನೆಲೆಯಲ್ಲಿ ನಿಷೇಧಿಸಲು ಶಿಫಾರಸ್ಸು

ಹೊಸದಿಲ್ಲಿ : ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ರಾಜಕೀಯ ಘಟಕ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಕೂಡ ನಿಷೇಧವಾಗುತ್ತಾ? ಬೆಂಗಳೂರಿನಲ್ಲಿ 2020ರಲ್ಲಿ ನಡೆದ ಗಲಭೆಯಲ್ಲಿ ಎಸ್‌ಡಿಪಿಐ ಕೈವಾಡ ಇರುವುದು ದೃಢಪಟ್ಟ ಕಾರಣ ರಾಜ್ಯ ಬಿಜೆಪಿ ಸರ್ಕಾರ ಈ ಚಿಂತನೆ ನಡೆಸಿದೆ ಎಂದು ವರದಿಯೊಂದು ಹೇಳಿದೆ.
ಮ್ಯಾಜಿಸ್ಟ್ರೇಟ್‌ ತನಿಖಾ ವರದಿ ಕೂಡ 2020ರ ಗಲಭೆಯಲ್ಲಿ ಎಸ್‌ಡಿಪಿಐ ಕೈವಾಡವನ್ನು ದೃಢೀಕರಿಸುತ್ತಿದೆ. ಎಸ್‌ಡಿಪಿಐ ಸದಸ್ಯರು ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಗಳಲ್ಲಿ ಭಯೋತ್ಪಾದಕರಂತೆ ವರ್ತಿಸಿದ್ದಾರೆ ಎಂದು ಬೆಂಗಳೂರು ನಗರ ಉಪ ಆಯುಕ್ತರ ತನಿಖಾ ವರದಿ ಹೇಳಿದೆ. ಇವುಗಳ ಆಧಾರದ ಮೇಲೆ ಎಸ್​ಡಿಪಿಐ ಬ್ಯಾನ್​ ಮಾಡಲು ಸರ್ಕಾರದ ಮಟ್ಟದಲ್ಲಿ ಚಿಂತನೆಗಳು ನಡೆದಿವೆ.

ಪಿ.ನವೀನ್‌ ಎಂಬಾತ ಫೇಸ್‌ಬುಕ್‌ನಲ್ಲಿ ಹಾಕಿದ್ದ ಒಂದು ಪೋಸ್ಟ್‌ ಬೆಂಗಳೂರಿನಲ್ಲಿ 2020ರ ಆಗಸ್ಟ್‌ 11ರಂದು ರಾತ್ರಿ ಗಲಭೆಗೆ ಕಾರಣವಾಗಿತ್ತು. ಇದರಿಂದಾಗಿ ಈತನ ಮನೆ ಸಮೀಪ ಡಿಜೆ ಹಳ್ಳಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಹಿಂಸಾಚಾರ ಸಂಭವಿಸಿತ್ತು. ಪುಲಕೇಶಿನಗರ ಕಾಂಗ್ರೆಸ್‌ ಶಾಸಕ ಆರ್‌.ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೂ ದಾಳಿ ನಡೆದಿತ್ತು. ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆ ಮೇಲೂ ದಾಳಿ ಆಗಿತ್ತು. ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು. ಶಾಸಕರ ನಿವಾಸ ಲೂಟಿ ಮಾಡಲಾಗಿತ್ತು.
ಮೂರು ವರ್ಷ ಹಿಂದೆ ನಡೆದಿರುವ ಗಲಭೆ ಇದು. ಕೆಲವೇ ನಿಮಿಷಗಳಲ್ಲಿ ಗಲಭೆ ವ್ಯಾಪಿಸಿದ ರೀತಿ ಗಮನಿಸಿದರೆ ಅದು ಪೂರ್ವಯೋಜಿತ ಕೃತ್ಯದಂತೆ ಕಾಣುತ್ತದೆ. ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. 20 ತಾಸು ಕಾಲ ಗಲಭೆ ನಡೆದಿತ್ತು. ಇದನ್ನು ದಿಢೀರ್‌ ಮಾಡುವುದು ಸಾಧ್ಯವೇ? ಪೂರ್ವಯೋಜನೆ ಇದ್ದರಷ್ಟೆ ಇಂತಹ ದೊಡ್ಡ ಪ್ರಮಾಣದ ಗಲಭೆ ಮಾಡುವುದು ಸಾಧ್ಯ. ಇದರ ಹಿಂದೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಕೈವಾಡ ಇರುವುದನ್ನು ಹಿಂದೆಯೇ ಹೇಳಿದ್ದೆವು. ಈಗ ಪುರಾವೆ ಸಿಕ್ಕಿದ್ದು, ಕೃತ್ಯ ದೃಢಪಟ್ಟಿದೆ. ಆದ್ದರಿಂದ ಎಸ್‌ಡಿಪಿಐ ನಿಷೇಧಕ್ಕೆ ಇದು ಸರಿಯಾದ ಸಮಯ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.































 
 

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ), ಅದರ ಸಹ ಸಂಘಟನೆಗಳು, ಅಧೀನ ಸಂಸ್ಥೆಗಳಿಗೆ ಐದು ವರ್ಷ ನಿಷೇಧ ಹೇರಲಾಗಿದೆ.ಆದರೆ ಪಿಎಫ್‌ಐನ ರಾಜಕೀಯ ಘಟಕ ಎಸ್‌ಡಿಪಿಐಯನ್ನು ಸರ್ಕಾರ ನಿಷೇಧಿಸಿರಲಿಲ್ಲ.
ಭಾರತದ ಚುನಾವಣಾ ಆಯೋಗದಲ್ಲಿ 2010ರ ಏಪ್ರಿಲ್‌ನಲ್ಲಿ ಎಸ್‌ಡಿಪಿಐ ನೋಂದಾವಣೆ ಮಾಡಿಕೊಂಡಿದ್ದು, ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜತೆಗಿನ ಸಂಪರ್ಕವನ್ನು ಎಸ್‌ಡಿಪಿಐ ನಿರಾಕರಿಸುತ್ತ ಬಂದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top