ದಲಿತ ಸಂಘಟನೆಯಿಂದ ಬಂಧಿಸದಿದ್ದರೆ ಹೋರಾಟದ ಎಚ್ಚರಿಕೆ
ಬೆಂಗಳೂರು : ಕೆಲವು ಬಿಜೆಪಿ ನಾಯಕರ ಜತೆ ನಂಟು ಇಟ್ಟುಕೊಂಡಿದ್ದಾನೆ ಎಂದು ಎಚ್ .ಡಿ. ಕುಮಾರಸ್ವಾಮಿ ಆರೊಪಿಸಿರುವ ಸ್ಯಾಂಟ್ರೊ ರವಿ ವಿರುದ್ಧ ಇದೀಗ ಆತನ ಪತ್ನಿಯೇ ಆತ್ಯಾಚಾರದ ಆರೋಪ ಹೊರಿಸಿದ್ದಾರೆ. ಇದರ ಬೆನ್ನಿಗೆ ದಲಿತ ಸಂಘಟನೆಗಳು ಸ್ಯಾಂಟ್ರೊ ರವಿಯನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ಆರೋಪಿಸಿ ಹೋರಾಟದ ಎಚ್ಚರಿಕೆ ನೀಡಿವೆ.
ಇಂಜಿನಿಯರಿಂಗ್ ಪದವೀಧರೆಯಾಗಿರುವ ಸಂತ್ರಸ್ತೆ ಬುಧವಾರ ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ದೂರು ನೀಡಿ ಪತಿ ರಾಜ್ಯ ಬಿಜೆಪಿ ನಾಯಕತ್ವದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
2019ರ ಮಾರ್ಚ್ 2ರಂದು ಪತ್ರಿಕೆಯಲ್ಲಿ ಜಾಹೀರಾತು ಬಂದಿದ್ದರಿಂದ ಉದ್ಯೋಗ ಅರಸಿ ಮಂಜುನಾಥ್ ಅವರ ನಿವಾಸಕ್ಕೆ ಹೋಗಿದ್ದೆ. ಕೆಲಸ ಕೊಡಿಸುವುದಾಗಿ ಹೇಳಿದ್ದರು. ಬಳಿಕ ಕರ್ತವ್ಯಕ್ಕೆ ಹಾಜರಾದಾಗ ಮತ್ತು ಬರಿಸುವ ಔಷಧಿ ಬೆರೆಸಿದ ಜ್ಯೂಸ್ ನೀಡಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನನ್ನ ಮೇಲೆ ಅತ್ಯಾಚಾರ ಎಸಗಿ, ಫೋಟೊಗಳನ್ನು ತೆಗೆದುಕೊಂಡು ಬ್ಲಾಕ್‌ಮೇಲ್ ಮಾಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.ನಂತರ ಮಂಜುನಾಥ್ ಜೀವ ಬೆದರಿಕೆ ಹಾಕಿ ಬಲವಂತವಾಗಿ ಮದುವೆಯಾಗಿದ್ದರು. ಮದುವೆಯ ನಂತರವೂ ಕಿರುಕುಳ ಮತ್ತು ಹಲ್ಲೆ ಮುಂದುವರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ, ಘಟನೆಯನ್ನು ಖಂಡಿಸಿರುವ ದಲಿತ ಸಂಘರ್ಷ ಸಮಿತಿ, ಆಡಳಿತಾರೂಢ ಬಿಜೆಪಿ ಸರ್ಕಾರ ಆರೋಪಿ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಸ್ಯಾಂಟ್ರೋ ರವಿಗೆ ಬಿಜೆಪಿ ಸರ್ಕಾರದ ಎಲ್ಲಾ ಸಚಿವರ ಜೊತೆಗೆ ಸಂಪರ್ಕವಿದೆ ಎಂದು ಆರೋಪಿಸಿದ್ದಾರೆ.
ಆರೋಪಿಯ, ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ಅಗೌರವದಿಂದ ಮಾತನಾಡಿರುವ ಆಡಿಯೋ ಕ್ಲಿಪ್ ಕೂಡ ವೈರಲ್ ಆಗಿದೆ.