ಯಶವಂತಪುರ ರೈಲು ನಿಲ್ದಾಣದಲ್ಲಿ ಸಂಭವಿಸಿದ ಘಟನೆ
ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದ ಹಳಿಯ ಬಳಿಯಲ್ಲಿದ್ದ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ತುಂಬಾ ದಿನಗಳ ಹಿಂದೆಯೇ ಇದನ್ನು ಇಲ್ಲಿಡಲಾಗಿದ್ದು, ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ವಚ್ಛತಾ ಸಿಬ್ಬಂದಿ ಅದನ್ನು ತೆರವುಗೊಳಿಸುವ ವೇಳೆ ಡ್ರಮ್‌ನಲ್ಲಿ ಮಹಿಳೆ ಶವ ಇರುವುದು ಪತ್ತೆಯಾಗಿದೆ. ಡ್ರಮ್ ಮೇಲೆ ಬಟ್ಟೆಗಳನ್ನು ಸುತ್ತಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.
ಯಶವಂತಪುರ ರೈಲು ನಿಲ್ದಾಣದ ಗೂಡ್ಸ್ ಪ್ಲಾಟ್‌ಫಾರ್ಮ್‌ನ ಡ್ರಮ್ ಒಂದರಲ್ಲಿ ಶವ ಪತ್ತೆಯಾಗಿದೆ. ಅಂದಾಜು 23 ವರ್ಷದ ಯುವತಿ ಎಂದು ಗುರುತಿಸಲಾಗಿದೆ. ಆರೋಪಿಗಳು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಯುವತಿಯನ್ನು ಕೊಲೆ ಮಾಡಿ ಪ್ಲಾಸ್ಟಿಕ್ ಕವರ್ ಒಂದರಲ್ಲಿ ಸೀಲ್ ಮಾಡಿಟ್ಟಿದ್ದರು. ಯುವತಿಯ ಗುರುತು ಪತ್ತೆ ಹಚ್ಚುತ್ತಿರುವ ಯಶವಂತಪುರ ರೈಲ್ವೆ ಪೊಲೀಸರು, ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ರೈಲು ನಿಲ್ದಾಣದ ಸ್ವಚ್ಛತಾ ಸಿಬ್ಬಂದಿ ಜಯಮ್ಮ ಪ್ಲಾಸ್ಟಿಕ್ ಡ್ರಮ್‌ನಿಂದ ವಾಸನೆ ಬರುತ್ತಿದ್ದನ್ನ ಕಂಡು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಈ ವೇಳೆ ಡ್ರಮ್‌ನಲ್ಲಿ ಶವ ಇರುವುದು ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವದ ಕುತ್ತಿಗೆಯಲ್ಲಿ ಬಿಳಿ ಬಣ್ಣದ ದುಪ್ಪಟ್ಟದಿಂದ ಗಂಟು ಬಿಗಿದಿರುವುದು ಪತ್ತೆಯಾಗಿದೆ. ಶವ ಕೊಳೆಯುವಂತೆ ಕೆಮಿಕಲ್ ಡ್ರಮ್‌ನಲ್ಲಿ ದುಷ್ಕರ್ಮಿಗಳು ಹಾಕಿದ್ದಾರೆ.