ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬ ಆರೋಪ
ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ, ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿರುದ್ಧ ಆರೋಪ ಹೊರಿಸಿ ಬಿಜೆಪಿ ನಾಯಕಿ ಗಾಯತ್ರಿ ರಘುರಾಮ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವ, ಸಮಾನ ಅವಕಾಶಗಳು ಸಿಗುತ್ತಿಲ್ಲ. ಭಾರವಾದ ಹೃದಯದಿಂದ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಅಣ್ಣಾಮಲೈ ಅವರ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಇದರಿಂದಾಗಿ ನಾನು ಪಕ್ಷ ತೊರೆಯುತ್ತಿದ್ದೇನೆ ಎಂದು ಗಾಯತ್ರಿ ರಘುರಾಮ್ ಟ್ವೀಟ್ ಮಾಡಿದ್ದಾರೆ.
ಮೋದಿಜಿ ನೀವು ವಿಶೇಷ, ನೀವು ರಾಷ್ಟ್ರಪಿತ, ನೀವು ಯಾವಾಗಲೂ ನನ್ನ ವಿಶ್ವಗುರು ಮತ್ತು ಮಹಾನ್ ನಾಯಕ. ಅಮಿತ್ ಶಾ ಜೀ ನೀವು ಯಾವತ್ತೂ ನನ್ನ ಚಾಣಕ್ಯ ಗುರುಗಳಾಗಿಯೇ ಇರುತ್ತೀರಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿರುವ ಮಾಜಿ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ವಿರುದ್ಧ ಗಾಯತ್ರಿ ರಘುರಾಮ್ ಗಂಭೀರ ಆರೋಪ ಮಾಡಿದ್ದು, ‘ಅಣ್ಣಾಮಲೈ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ, 6 ತಿಂಗಳು ಅಮಾನತು ಮಾಡಿ ಪಕ್ಷದಿಂದ ದೂರವಿರಿಸಿದರು. ಪಕ್ಷದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಹೇಳಿದ್ದಾರೆ.
ಗಾಯತ್ರಿ ರಘುರಾಮ್ ಅವರ ಆರೋಪಗಳನ್ನು ಅಣ್ಣಾಮಲೈ ತಳ್ಳಿಹಾಕಿದ್ದು, ಆಕೆಯಿಂದ ಪಕ್ಷಕ್ಕೆ ನಷ್ಟವಿಲ್ಲ ಎಂದಿದ್ದಾರೆ. ಆರೋಪಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಗಾಯತ್ರಿ ರಘುರಾಮನ್ ಅವರು ಪಕ್ಷದ ಶಿಸ್ತು ಉಲ್ಲಂಘನೆ, ಪಕ್ಷಕ್ಕೆ ಮುಜುಗರ ಉಂಟುಮಾಡುವುದು, ಪಕ್ಷದ ನಿಯಮಗಳನ್ನು ಮೀರುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿದ್ದರಿಂದ ಅವರನ್ನು ಪಕ್ಷದಿಂದ 6 ತಿಂಗಳವರೆಗೆ ಅಮಾನತ್ತು ಮಾಡಲಾಗಿತ್ತು. ಗಾಯತ್ರಿ ರಘುರಾಮ್ ಅವರು ಮಹಿಳಾ ಘಟಕದ ಅಧ್ಯಕ್ಷೆ ಮಾತ್ರವಲ್ಲದೆ ಸಾಗರೋತ್ತರ ತಮಿಳು ಅಭಿವೃದ್ಧಿ ವಿಭಾಗದ ಅಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದರು.