ಅಧ್ಯಾತ್ಮ, ತತ್ವಶಾಸ್ತ್ರದ ಮಹಾನ್ ಚೇತನ ಸಿದ್ದೇಶ್ವರ ಶ್ರೀ ಲಿಂಗೈಕ್ಯ

ಬೆಂಗಳೂರು: ಶತಮಾನದ ಸಂತ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ (81 ವ.) ಅವರು ಜ. 2ರಂದು ಆಶ್ರಮದಲ್ಲಿ ಕೊನೆಯುಸಿರೆಳೆದರು.
ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಳೆದ 4 ದಿನಗಳಿಂದ ಆಹಾರ ಸೇವನೆಯನ್ನು ನಿಲ್ಲಿಸಿದ್ದರು. ವಿಜಯಪುರ ಬಿ.ಎಲ್.ಡಿ.ಇ. ಆಸ್ಪತ್ರೆಯ ತಜ್ಞ ವೈದ್ಯರ ತಂಡ ಆಶ್ರಮದಲ್ಲೇ ಚಿಕಿತ್ಸೆ ನೀಡುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದರು.

ವಿಜಯಪುರ ಜಿಲ್ಲೆಯ ಬಿಜ್ಜರಗಿಯಲ್ಲಿ 1940 ಅ. 24ರಂದು ಜನಿಸಿದರು. ತಂದೆ ಓಗೆಪ್ಪಗೌಡ ಬಿರಾದಾರ, ತಾಯಿ ಸಂಗವ್ವ. ಬಾಲ್ಯದ ಹೆಸರು ಸಿದ್ಧಗೊಂಡ ಬಿರಾದಾರ. ಬಾಲ್ಯದಿಂದಲೇ ಆಧ್ಯಾತ್ಮಿಕ ಸೆಳೆತಕ್ಕೆ ಒಳಗಾಗಿ, ಅಧ್ಯಾತ್ಮ, ತತ್ವಶಾಸ್ತ್ರದ ಮಹಾನ್ ಚೇತನವಾಗಿ ಬೆಳೆದರು.ದಾನಿಗಳ ನೆರವು, ಸರಕಾರದ ನೆರವನ್ನು ನಯವಾಗಿಯೇ ತಿರಸ್ಕರಿಸಿ, ಹಣದಿಂದ ದೂರವಿದ್ದವರು. ಪದ್ಮಶ್ರೀ ಪ್ರಶಸ್ತಿ ನೀಡಲು ಸರಕಾರ ಮುಂದೆ ಬಂದಾಗ, ಅದರಿಂದಲೂ ದೂರವೇ ನಿಂತರು.ಕೊಲ್ಹಾಪುರದ ಛತ್ರಪತಿ ಶಿವಾಜಿ ಮಹಾರಾಜ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

1958ರಲ್ಲಿ ಚಡಚಣದಲ್ಲಿ ಪ್ರವಚನ ಮುಕ್ತಾಯ ಸಂದರ್ಭದಲ್ಲಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳು ಬಾಲ ಸಿದ್ಧಗೊಂಡನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಸಿದ್ದೇಶ್ವರ ಎಂದು ನಾಮಕರಣ ಮಾಡಿದರು. ಅಲ್ಲಿಂದಲೇ ಸಿದ್ದೇಶ್ವರ ಸ್ವಾಮೀಜಿಯ ಅಧ್ಯಾತ್ಮ ಜೀವನ ಯಾತ್ರೆ ಶುರುವಾಯಿತು. ಮಲ್ಲಿಕಾರ್ಜುನ ಸ್ವಾಮೀಜಿ ಬಗ್ಗೆ ಅಪಾರ ಭಕ್ತಿ ಹೊಂದಿದ್ದ ಸಿದ್ದೇಶ್ವರರನ್ನು ಆಶ್ರಮದಲ್ಲಿಯೇ ಉಳಿಸಿಕೊಂಡು ಪೋಷಿಸಿದರು.































 
 

ಸಿದ್ದೇಶ್ವರ ಶ್ರೀಗೆ ಪ್ರವಚನವೇ ಜೀವನ. ಪರಿಪೂರ್ಣ ಬದುಕಿಗೆ ಪ್ರವಚನದ ಪಥ ತೋರಿದವರು. ಕನ್ನಡ, ಇಂಗ್ಲಿಷ್, ಪರ್ಷಿಯನ್ ಸಹಿತ ಅನೇಕ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಇಂಗ್ಲಿಷ್ ಭಾಷೆಯಲ್ಲಿಯೂ ನಿರರ್ಗಳವಾಗಿ ಪ್ರವಚನ ನೀಡುತ್ತಿದ್ದರು. ಸಾಕ್ರೆಟಿಸ್, ಕನ್ಫ್ಯೂಷಿಯಸ್ ತತ್ವಗಳಿಂದ ಹಿಡಿದು, ಬುದ್ಧನ ಬೋಧನೆಗಳನ್ನು, ಬಸವಣ್ಣವರ ವಿಚಾರಗಳನ್ನು, ವೇದಗಳ ಸಾರವನ್ನು ಪ್ರವಚನದಲ್ಲಿ ಉಲ್ಲೇಖಿಸುವ ವಿದ್ವತ್ತು ಅವರಿಗಿತ್ತು. ಅಮೆರಿಕ, ಜಪಾನ್ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಶ್ರೀಗಳು ಪ್ರವಚನ ನೀಡಿದವರು.

ಇಂದು ಅಂತಿಮ ದರ್ಶನ:
ಮಂಗಳವಾರ ಬೆಳಿಗ್ಗೆ 5 ಗಂಟೆಯಿಂದ ವಿಜಯಪುರ ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 5ರವರೆಗೂ ಅಂತಿಮ ದರ್ಶನ ನಡೆಯಲಿದೆ. ಬಳಿಕ ವಿಜಯಪುರದ ಶಿವಾಜಿ ಸರ್ಕಲ್, ಗಾಂಧಿ ಚೌಕ, ಸಿದ್ಧೇಶ್ವರ ದೇವಸ್ಥಾನ, ಬಿ.ಎಲ್.ಡಿ. ಮೆಡಿಕಲ್ ಕಾಲೇಜು ರಸ್ತೆ ಮೂಲಕ ಅಂತಿಮ ಯಾತ್ರೆ ನಡೆಯಲಿದೆ. ನಂತರ ಜ್ಞಾನಯೋಗಾಶ್ರಮದ ಆವರಣದಲ್ಲಿ ಸರಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನ ನೆರವೇರಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top