ಪುತ್ತೂರು: ಧರ್ಮಜಾಗೃತಿಯ ಜೊತೆಗೆ ಅನ್ನ, ಅಕ್ಷರಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವವನ್ನು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಜ. 22ರಂದು ಆಯೋಜಿಸಿದ್ದು, ರಾಜ್ಯದ ಎಲ್ಲಾ ಕಡೆಗಳಿಂದಲೂ ಜನ ಬಂದು ಸೇರಲಿದ್ದಾರೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಮಹಾಸಂಸ್ಥಾನ ಒಕ್ಕಲಿಗರ ಪೀಠವಾದರೂ, ಎಲ್ಲಾ ಸಮುದಾಯದವರನ್ನು ಅಪ್ಪಿಕೊಂಡು – ಒಪ್ಪಿಕೊಂಡು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಭೈರವೈಕ್ಯರಾಗಿರುವ ಪರಮಪೂಜ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 78ನೇ ಜಯಂತ್ಯೋತ್ಸವ ಸಂಸ್ಮರಣೆಯ ಮೂಲಕ ಮಹಾಸ್ವಾಮೀಜಿಗಳ ಕಾರ್ಯಗಳನ್ನು ಮತ್ತೊಮ್ಮೆ ನೆನಪಿಸುವ ಕಾರ್ಯ ಪುತ್ತೂರಿನಲ್ಲಿ ನಡೆಯಲಿದೆ ಎಂದರು.
ರಜತ ತುಲಾಭಾರ, ಗ್ರಂಥ ಲೋಕಾರ್ಪಣೆ, ಆಂಗ್ಲ ಮಾಧ್ಯಮಕ್ಕೆ ಶಿಲಾನ್ಯಾಸ:
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಜಯಂತ್ಯೋತ್ಸವ ಸಂಸ್ಮರಣಾ ಕಾರ್ಯಕ್ರಮದ ಜೊತೆಗೆ, ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿಯವರು ಪೀಠಾಧಿಪತಿಗಳಾಗಿ 10 ವರ್ಷ ಸಂದ ಹಿನ್ನೆಲೆಯಲ್ಲಿ ಅವರಿಗೆ ರಜತ ತುಲಾಭಾರವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭ “ಸಂಸ್ಕೃತ – ಸಂಸ್ಕೃತಿಗೆ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಕೊಡುಗೆ” ಮಹಾಪ್ರಬಂಧದ ಅನಾವರಣವೂ ಇದೇ ಸಂದರ್ಭ ನಡೆಯಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮಹತ್ತರವಾದದ್ದು. ಇದಕ್ಕೆ ಪೂರಕವಾಗಿ ಜಯಂತ್ಯೋತ್ಸವ ಸಂಸ್ಮರಣಾ ಸಮಾರಂಭದ ದಿನವೇ ಉಪ್ಪಿನಂಗಡಿಯ ಪೆರಿಯಡ್ಕದಲ್ಲಿರುವ ಸಂಸ್ಥಾನದ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಗೂ ಶಂಕುಸ್ಥಾಪನೆ ನೆರವೇರಲಿದೆ ಎಂದು ವಿವರಿಸಿದರು.
ರಾಜಕೀಯ ರಹಿತ ಕಾರ್ಯಕ್ರಮ: ಡಿ.ವಿ.
ಕೇಂದ್ರದ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 58ನೇ ಜಯಂತ್ಯೋತ್ಸವ ಪುತ್ತೂರಿನಲ್ಲೇ ನಡೆದಾಗ ತಾನು ಇಲ್ಲಿ ಶಾಸಕನಾಗಿದ್ದೆ. 68ನೇ ಜಯಂತ್ಯೋತ್ಸವದ ಸಂದರ್ಭ ಮುಖ್ಯಮಂತ್ರಿಯಾಗಿದ್ದು, ಬೆಂಗಳೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದು, 5 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಇದೀಗ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಮಹಾಸ್ವಾಮೀಜಿಗಳ 78ನೇ ಜಯಂತ್ಯೋತ್ಸವವನ್ನು ಆಯೋಜಿಸಿದ್ದು, ರಾಜಕೀಯ ರಹಿತವಾಗಿ ಈ ಕಾರ್ಯಕ್ರಮ ಮೂಡಿಬರಲಿದೆ ಎಂದರು.
ಅದ್ದೂರಿ ಮೆರವಣಿಗೆ:
ರಾಜ್ಯಮಟ್ಟದ ಕಾರ್ಯಕ್ರಮ ಇದಾಗಿದ್ದು, ಸಮಾರಂಭಕ್ಕೆ ಮುಂಚಿತವಾಗಿ ಪುತ್ತೂರಿನಲ್ಲಿ ಅದ್ದೂರಿ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ಪುತ್ತೂರು ಪೇಟೆಯನ್ನು ಶೃಂಗರಿಸುವ ಕೆಲಸವೂ ನಡೆಯಲಿದೆ. ಇತ್ತೀಚೆಗೆ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿಗಳು ಸುಳ್ಯದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿದಾಗ ಅಲ್ಲಿ ಅದ್ಭುತ ಸ್ಪಂದನೆ ದೊರೆತಿತ್ತು. ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಗಳು ಪುತ್ತೂರು ಹಾಗೂ ಬೆಳ್ತಂಗಡಿಯಲ್ಲಿ ಪ್ರವಾಸ ಕೈಗೊಂಡು, ಜನಸಾಮಾನ್ಯರ ಬಳಿಗೆ ತಲುಪುವ ಕಾರ್ಯ ಮಾಡಿದ್ದರು. ಈ ಎಲ್ಲಾ ಕಾರ್ಯಕ್ರಮದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಮಹಾಸ್ವಾಮೀಜಿಗಳ 78ನೇ ಜಯಂತ್ಯೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಯಶಸ್ಸಿಗಾಗಿ ಈಗಾಗಲೇ ಮನೆಮನೆಗೆ ಆಮಂತ್ರಣವನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ. ಗುರುಗಳ ಭಾವಚಿತ್ರವುಳ್ಳ ಸ್ಟಿಕ್ಕರನ್ನು ನೀಡುವ ಕಾರ್ಯವೂ ನಡೆಯುತ್ತಿದೆ. ಒಟ್ಟಿನಲ್ಲಿ, ಮಹಾಸ್ವಾಮೀಜಿಗಳ ಕೊಡುಗೆಗಳನ್ನು ಮತ್ತೆ ಜ್ಞಾಪಿಸುವ ಕೆಲಸ ಪುತ್ತೂರಿನಲ್ಲಿ ನಡೆಯಲಿದೆ ಎಂದರು.
ಮಹಾಪ್ರಬಂಧದ ಬಗ್ಗೆ:
ತಾವು ಬರೆದ ಮಹಾಪ್ರಬಂಧ `ಸಂಸ್ಕೃತ – ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ’ಗಳ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ, ನಾನು 3-4 ವರ್ಷದವನಿದ್ದಾಗ ಮಹಾಸಂಸ್ಥಾನದ ಸಂಪರ್ಕಕ್ಕೆ ಬಂದೆ. ಸುಮಾರು 38 ವರ್ಷಗಳ ಕಾಲ ಮಹಾಸಂಸ್ಥಾನವನ್ನು, ಮಹಾಸ್ವಾಮೀಜಿಗಳ ಕಾರ್ಯವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಬಹುವಿಸ್ತಾರವಾಗಿ ಎಲ್ಲಾ ಮಜಲುಗಳಲ್ಲೂ ಹಬ್ಬಿಕೊಂಡಿರುವ ಮಹಾಸಂಸ್ಥಾನದ ಕಾರ್ಯವೈಖರಿಯ ಹಿಂದೆ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಪರಿಶ್ರಮವಿತ್ತು. ಇದರ ಜೊತೆಗೆ ಅಲ್ಲಿನ ಐತಿಹಾಸಿಕ, ಜಾನಪದೀಯ ವಿಚಾರಗಳನ್ನು ಗ್ರಂಥದಲ್ಲಿ ದಾಖಲಿಸುವ ಕೆಲಸ ಮಾಡಿದ್ದೇನೆ. ಸಂಸ್ಕೃತ ಭಾಷೆಯನ್ನು ಎಲ್ಲಾ ಜನರಿಗೂ ಎಟುಕುವಂತೆ ಮಾಡುವಲ್ಲಿಯೂ ಮಹಾಸ್ವಾಮೀಜಿಗಳ ಪಾತ್ರ ಮಹತ್ತರವಾದದ್ದು. ಇಂದು 8 – 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಂಸ್ಕೃತ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಬೇರೆ ಬೇರೆ ಕಡೆಗಳಲ್ಲಿ ಸಂಸ್ಥಾನದ ಶಿಷ್ಯರು ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲಾ ವಿಚಾರಗಳನ್ನು ದಾಖಲಿಸುವ ಪ್ರಯತ್ನ ಮಹಾಪ್ರಬಂಧದಲ್ಲಿ ಮಾಡಿದ್ದೇನೆ. ಅದನ್ನು ಗ್ರಂಥರೂಪದಲ್ಲಿ ಜನರ ಮನಸ್ಸಿಗೆ ತಲುಪಿಸುವ ಕಾರ್ಯ ಜಯಂತ್ಯೋತ್ಸವ ಸಂಸ್ಮರಣೆಯಲ್ಲಿ ಆಗಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು, ಜಯಂತ್ಯೋತ್ಸವ ಸಂಸ್ಮರಣಾ ಸಮಿತಿ ಸಂಚಾಲಕರಾದ ಚಿದಾನಂದ ಬೈಲಾಡಿ, ಪುರುಷೋತ್ತಮ ಮುಂಗ್ಲಿಮನೆ, ಒಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ಅಧ್ಯಕ್ಷ ವಿಶ್ವನಾಥ ಗೌಡ, ಒಕ್ಕಲಿಗ ಗೌಡ ಯುವ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ದಿನೇಶ್ ಮೆದು ಉಪಸ್ಥಿತರಿದ್ದರು.