ನಿಮ್ಮ ಮೇಲೆ ಯಾರಾದ್ರೂ ಸವಾರಿ ಮಾಡ್ತಾರೆ ಅಂದರೆ ಅದಕ್ಕೆ ನೀವೇ ಕಾರಣ!

ದಬ್ಬಾಳಿಕೆಗೆ ಒಗ್ಗಿದ ಮನಸ್ಸು ಸ್ವಾತಂತ್ರ್ಯ ಬಯಸುವುದಿಲ್ಲ

ಕೋಳಿಗಳು ಸಾಲಿನಲ್ಲಿ ಹೋಗುತ್ತಾ ಇರುವಾಗ ಒಂದು ದೊಡ್ಡ ಕೋಳಿಯು ಇತರ ಸಣ್ಣ ಕೋಳಿಗಳ ತಲೆಯ ಮೇಲೆ ಮೊಟಕುತ್ತ ಹೋಗುತ್ತದೆ. ಈ ವರ್ತನೆಗೆ ಮನಶ್ಶಾಸ್ತ್ರಜ್ಞರು ಇಟ್ಟ ಹೆಸರು ಅಧಿಪತ್ಯ ಸ್ಥಾಪನೆ (Dominance) ಎಂದು! ತಾನು ದೊಡ್ಡವನು, ಗಟ್ಟಿಗ ಎನ್ನುವುದನ್ನು ಇತರರ ಮೇಲೆ ಸ್ಥಾಪನೆ ಮಾಡುವುದು ಪ್ರಾಣಿಗಳ ಸಹಜವಾದ ಪ್ರವೃತ್ತಿ. ಮನುಷ್ಯನ ಸಹಜ ಪ್ರವೃತ್ತಿ ಕೂಡ!

ಮನುಷ್ಯ ಹೆಚ್ಚು ಆಸೆ ಪಡುವುದು ಅಧಿಕಾರಕ್ಕೆ































 
 

ಮನುಷ್ಯನ ಸಹಜ ಆಕಾಂಕ್ಷೆಗಳಲ್ಲಿ ದುಡ್ಡು, ಪ್ರಸಿದ್ಧಿ, ಕೀರ್ತಿ, ಪ್ರಚಾರ ಮತ್ತು ಅಧಿಕಾರ ಮುಖ್ಯವಾದದ್ದು. ಆದರೆ ಅವೆಲ್ಲವನ್ನೂ ಸಾಲಾಗಿಟ್ಟು ನಿಮ್ಮ ಆದ್ಯತೆ ಏನು ಎಂದು ಕೇಳಿದಾಗ ಶೇ.63 ಜನರು ಅಧಿಕಾರವೇ ಬೇಕು ಅಂದರಂತೆ! ಇನ್ನೊಬ್ಬರ ಮೇಲೆ ಅಧಿಕಾರ ಚಲಾಯಿಸುವುದು ಅಂದರೆ ಎಲ್ಲರಿಗೂ ಬಹುಪ್ರೀತಿ ಎಂದಾಯಿತು. ಆದರೆ ಜಗತ್ತಿನಲ್ಲಿ ಆರ್ಧಾಂಶಕ್ಕಿಂತ ಅಧಿಕ ಸಂಖ್ಯೆಯ ಜನರು ಬೇರೆಯವರಿಂದ ಆಳಲ್ಪಡಲು ಆಸೆ ಪಡುತ್ತಾರೆ ಅನ್ನುತ್ತದೆ ಸಮೀಕ್ಷೆ.

ಐಡೆಂಟಿಟಿ ಇಲ್ಲದವರು

ಅವರಿಗೆ ಸ್ವಂತ ನಿರ್ಧಾರವೇ ಇರುವುದಿಲ್ಲ. ಅವರು ಮಿತಿಗಿಂತ ಹೆಚ್ಚು ಬೇರೆಯವರನ್ನು ಡಿಪೆಂಡ್ ಆಗಿರುತ್ತಾರೆ. ತಾವು ಇನ್ನೊಬ್ಬರ ದಬ್ಬಾಳಿಕೆಯ ಬೂಟಿನ ಅಡಿಯಲ್ಲಿ ಬದುಕುತ್ತೇವೆ ಅನ್ನುವುದು ಕೂಡ ಅವರಿಗೆ ಗೊತ್ತಿರುವುದಿಲ್ಲ. ಅವರನ್ನು ಎಮೋಷನಲ್ ಬ್ಲಾಕಮೇಲ್ ಮಾಡಿ ತಮ್ಮ ಮುಷ್ಟಿಯಲ್ಲಿ ಇರಿಸಿಕೊಳ್ಳುವುದು ತುಂಬಾ ಸುಲಭ. ಬೆಳ್ಳಗಿರುವುದನ್ನು ಹಾಲೆಂದು ನಂಬುವವರನ್ನು ಮೋಸ ಮಾಡುವುದು ಸುಲಭ. ಮೋಸ ಹೋಗುವ ಮಂದಿ ಇರುವಾಗ ಮೋಸ ಮಾಡುವ ಮಂದಿಯ ಸಂಖ್ಯೆ ಕೂಡ ಹೆಚ್ಚಿರುತ್ತದೆ. ಆಳಲ್ಪಡುವ ಮಂದಿಯ ಸಂಖ್ಯೆ ಹೆಚ್ಚಾದ ಹಾಗೆ ಆಳುವವರ ಸಂಖ್ಯೆ ಕೂಡ ಹೆಚ್ಚಿರುತ್ತದೆ ಅಲ್ಲವೇ?

ಬೇರೆಯವರ ಭುಜದ ಮೇಲೆ ಬಂದೂಕು ಇಟ್ಟು ಹೋರಾಟ ಮಾಡಬಾರದು

ಈ ಆಳಲ್ಪಡುವ ಮಂದಿಯ ಒಂದು ಸಮಸ್ಯೆ ಏನೆಂದರೆ ಎಲ್ಲದಕ್ಕೂ ಇನ್ನೊಬ್ಬರನ್ನು ಡಿಪೆಂಡ್ ಆಗುವುದು. ಇದು ಭಾವನಾತ್ಮಕ ಅವಲಂಬನೆ ಆದಷ್ಟು ಅವರು ಹೆಚ್ಚು ನೋವು ಪಡುತ್ತಾರೆ. ಬೇರೆಯವರ ಹೆಗಲ ಮೇಲೆ ಬಂದೂಕು ಇಟ್ಟು ಹೋರಾಟಕ್ಕೆ ಇಳಿದವರು ಯುದ್ಧ ಗೆಲ್ಲುವುದು ಹೇಗೆ? ಬೇರೆಯವರ ನೆರಳಾಗಿ ಬದುಕಲು ಇಚ್ಛೆ ಪಡುವ ಅಂತವರು ತಾವು ಬೆಳಕಾಗಲು ಇಷ್ಟ ಪಡುವುದೇ ಇಲ್ಲ. ಈ ಪರಾವಲಂಬನೆಯ ಬದುಕು ಅವರ ಅಸ್ತಿತ್ವವನ್ನು ನಾಶ ಮಾಡುತ್ತ ಹೋಗುತ್ತದೆ.
ಅಂಥವರಲ್ಲಿ ಆತ್ಮವಿಶ್ವಾಸವು ಹುಟ್ಟುವುದೇ ಇಲ್ಲ. ಅಂಥವರು ದುರ್ಬಲ ಮನಸ್ಸಿನ ಪ್ರತೀಕವಾಗಿ ತಮ್ಮ ಬದುಕನ್ನು ಮುಗಿಸುತ್ತಾರೆ. ಅವರಿಗೆ ಅರಿವೇ ಇಲ್ಲದಂತೆ ಫೇಕ್ ಆಗುತ್ತಾ ಹೋಗುತ್ತಾರೆ. ತಾನು ಇಂತವರ ಮಗ, ಇಂತವರ ಮಗಳು, ಇಂತವರ ಅಣ್ಣ, ಇಂತವರ ಅಕ್ಕ, ಇಂತವರ ಫ್ರೆಂಡ್, ಇಂತವರ ಅಮ್ಮ, ಇಂತವರ ಅಪ್ಪ… ಹೀಗೆ ಹೇಳುತ್ತ ಸುಖಿಸುತ್ತಾರೆ. ಅವರಿಗೆ ಅದೇ ಐಡೆಂಟಿಟಿ ಆಗಿರುತ್ತದೆ. ಬೇರೆಯವರ ಹೆಜ್ಜೆಗುರುತುಗಳಲ್ಲಿ ಹೆಜ್ಜೆ ಇಟ್ಟು ಸುಖವನ್ನು ಕಾಣುವ ಅಂತಹ ಪರಾವಲಂಬಿ ವ್ಯಕ್ತಿಗಳು ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸುವುದು ಯಾವಾಗ?

ಒಮ್ಮೆ ಮೈಕೊಡಹಿ ಎದ್ದು ನಿಂತು ನೋಡಿ

ಜೀವನವಿಡೀ ಇನ್ನೊಬ್ಬರ ದಬ್ಬಾಳಿಕೆಯಲ್ಲಿ ಬದುಕುತ್ತಿರುವ ಮತ್ತು ಅದನ್ನೇ ಸುಖವೆಂಬ ಕಲ್ಪನೆಯಲ್ಲಿ ಬದುಕುತ್ತಿರುವ ಸಾವಿರಾರು ಮಂದಿ ಇದ್ದಾರೆ. ಈ ಬೌದ್ಧಿಕ ದಾಸ್ಯದಿಂದ ಅವರು ಹೊರಬರಲು ಆಸೆ ಪಡುತ್ತಾರೆ ಎಂದಾದರೆ ಅವರಿಗೆ ನನ್ನ ಸರಳವಾದ ಸಲಹೆ ಏನೆಂದರೆ ಒಮ್ಮೆ ಮೈ ಕೊಡಹಿ ಎದ್ದು ನಿಂತು ನೋಡಿ. ಬೇರೆಯವರು ನಿಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಅಂದರೆ ಅದಕ್ಕೆ ಅವರು ಕಾರಣ ಅಲ್ಲವೇ ಅಲ್ಲ. ಅದಕ್ಕೆ ನೀವೇ ಕಾರಣ. ಒಮ್ಮೆ ಬೇರೆಯವರ ಪ್ರಭಾವಳಿಯಿಂದ ಹೊರಬಂದು ನಿಂತು ನೋಡಿ ನಿಮಗೆ ಸಾವಿರ ಆನೆಗಳ ಶಕ್ತಿ ಬಂದಿರುತ್ತದೆ.
ನೀವು ಸ್ಟ್ರಾಂಗ್ ಆಗಲು ಬಯಸುತ್ತೀರಿ ಎಂದಾದರೆ ಮೊದಲು ನಿಮ್ಮ ಕೋರ್ ಸ್ಟ್ರಾಂಗ್ ಮಾಡಿಕೊಳ್ಳಿ. ಸ್ವಂತ ನಿರ್ಧಾರಗಳನ್ನು ಕೈಗೊಳ್ಳುವುದನ್ನು ಕಲಿಯಿರಿ. ಬೇರೆಯವರನ್ನು ಆರಾಧನೆ ಮಾಡಿಕೊಳ್ಳುವುದನ್ನು ಬಿಟ್ಟು ಹೊರಬನ್ನಿ. ನಿಮ್ಮದೇ ಆದ ವ್ಯಕ್ತಿತ್ವ ರೂಪಿಸಿಕೊಳ್ಳಿ. ಜೀವನದಲ್ಲಿ ಹೆಚ್ಚು ಸವಾಲುಗಳನ್ನು ಎದುರಿಸಿದ ವ್ಯಕ್ತಿಗಳು ಹೆಚ್ಚು ಸ್ಟ್ರಾಂಗ್ ಆಗುವುದು ಖಂಡಿತ.
ಏಕೆಂದರೆ ಬೇರೆಯವರು ಮಾಡಿದ ರಾಜಮಾರ್ಗದಲ್ಲಿ ನಡೆಯುವುದಕ್ಕಿಂತ ನೀವೇ ಮಾಡಿದ ಕಿರುದಾರಿಯಲ್ಲಿ ನಡೆಯುವುದು ನಿಮಗೆ ಹೆಚ್ಚು ಶಕ್ತಿ ಕೊಡುತ್ತದೆ. ಒಮ್ಮೆ ನಡೆದುನೋಡಿ.
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top