ಮೃತನ ಸಂಸಾರಕತೆ ಶವವಾಹಕರಿಗೇಕೆ?|
ಸತಿಯು ಗೋಳಿಡಲಿ, ಸಾಲಿಗನು ಬೊಬ್ಬಿಡಲಿ||
ಜಿತಮನದಿ ಚಿತೆಗಟ್ಟಿಕೊಂಡೊಯ್ಯುತಲಿಹರವರು
ಧೃತಿಯ ತಳೆ ನೀನಂತು- ಮಂಕುತಿಮ್ಮ||
ಸತ್ತವನ ಮನೆಯ ದುಃಖದ ವಿಚಾರದ ಕಡೆಗೆ ಶವವನ್ನು ಕೊಂಡು ಹೋಗುವವನು ಗಮನ ಕೊಡುವುದಿಲ್ಲ. ಸತ್ತವನ ಹೆಂಡತಿ ಗೋಳಾಡುತ್ತಿದ್ದರೂ; ಸಾಲ ಕೊಟ್ಟವನು ಬಂದು ಗಲಾಟೆ ಮಾಡುತ್ತಿದ್ದರೂ ಅದಾವುದನ್ನು ಲೆಕ್ಕಿಸದೆ ದೃಢ ಮನಸ್ಸಿನಿಂದ ಶವವನ್ನು ಸುಡಲು ಚಿತೆಗೆ ಕೊಂಡುಹೋಗುವನು. ನಾವು ಕೂಡ ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಎದುರಾದರೂ ಧೃತಿಗೆಡದೆ ದೃಢವಾದ ಮನಸ್ಸಿನಿಂದ ಮುನ್ನಡೆಯಬೇಕು ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ಮರಣದ ಮನೆಯಲ್ಲಿ ಸತ್ತವರನ್ನು ನೆನೆನೆನೆದು ಮನೆಯವರು ಹಾಗೂ ಬಂಧುಗಳು ಮತ್ತು ಸ್ನೇಹಿತರು ದುಃಖಿಸುವುದು ಸಹಜ.. ಅವರೆಲ್ಲರಿಗೂ ಸತ್ತವರೊಂದಿಗೆ ಒಂದು ಭಾವನಾತ್ಮಕ ಸಂಬಂಧವಿರುತ್ತದೆ. ಸಾಲ ಕೊಟ್ಟವರು ತಮ್ಮ ಸಾಲವನ್ನು ಮುಂದೆ ತೀರಿಸುವವರಾರು ಎಂದು ಬೊಬ್ಬಿಡುತ್ತಾರೆ. ಸಾಲ ಕೊಟ್ಟವರಿಗೆ ಸತ್ತವರೊಂದಿಗೆ ವ್ಯವಹಾರಿಕ ಸಂಬಂಧವಿರುತ್ತದೆ. ಆದರೆ ಶವ ಸಂಸ್ಕಾರ ಮಾಡುವವರು ಮಾತ್ರ ಅದಷ್ಟು ಬೇಗ ಅದನ್ನು ಮುಗಿಸುವ ಆತುರದಲ್ಲಿರುತ್ತಾರೆ. ಅವರಿಗೆ ಯಾವುದೇ ಸಾವಿನ ನೋವು ಕಾಡುವುದಿಲ್ಲ. ಯಾಕೆಂದರೆ ಅವರಿಗೆ ಸತ್ತವರೊಂದಿಗೆ ಯಾವುದೇ ರೀತಿಯ ಅನುಬಂಧ ಇರುವುದಿಲ್ಲ.
ಜೀವನದಲ್ಲಿ ಶವ ವಾಹಕರಂತೆ ದೃಢವಾದ ಮನಸ್ಥಿತಿಯನ್ನು ಹೊಂದಬೇಕು. ಅತಿಯಾದ ಬಾಂಧವ್ಯದ ಮೋಹಕ್ಕೆ ಒಳಗಾಗದೆ ತಮ್ಮ ಕರ್ತವ್ಯವನ್ನು ಅರಿತು ಅದನ್ನು ನಿಷ್ಠೆಯಿಂದ ನಿರ್ವಹಿಸುವ ಕಡೆ ಗಮನ ಕೊಡಬೇಕು.
ಸುಖಪಡುವೆ ದುಃಖಿಸುವೆನೆನುತೇಕೆ ಭಾವಿಸುವೆ?|
ಸುಖದುಃಖಗಳ ಪಡೆಯೆ ನಿನ್ನಿಚ್ಛೆಯೆ||
ಸುಖದುಃಖಗಳು ಬಹವು ಕರ್ಮಕ್ಕೆ ತಕ್ಕಂತೆ|
ಮುಖದಂತೆ ಪ್ರತಿಬಿಂಬ -ಬೋಳುಬಸವ||
ಎಂಬ ಕವಿ ನಿಜಗುಣರ ನುಡಿಯಂತೆ ಸುಖದುಃಖಗಳು ನಮ್ಮ ಎಣಿಕೆಯಂತೆ ಬರುವುದಲ್ಲ. ಏನೇ ಬರಲಿ ಅದನ್ನು ಸಹಿಸುವ ಸಹನೆ ನಮ್ಮದಾಗಬೇಕು.
ಸಾಂಸಾರಿಕ ಬದುಕಿನಲ್ಲಿ ಏನೇ ನೋವುಗಳು ಬಂದರೂ ಅದಕ್ಕೆ ಇತರರನ್ನು ದೂಷಣೆ ಮಾಡುವುದನ್ನು ಬಿಟ್ಟು ಇದು ನಾನು ಅನುಭವಿಸಲೇ ಬೇಕಾದ ಕರ್ಮದ ಫಲ ಎಂದು ಭಾವಿಸಿ ದೃಢ ಮನಸ್ಸಿನಿಂದ ಅದನ್ನು ಸ್ವೀಕರಿಸಬೇಕು.
ಶಿಲುಬೆಗೇರಿದೆನೆಂದು ಅತ್ತುಕರೆದನೆ ಏಸು?|
ಮೊಳೆ ಹೊಡೆದ ಜನರ ತಾ ದೂಷಿಸಿದನೇನು||
ಬಂದ ನೋವನು ಮರೆತು ನುಂಗಿ ನಗುತಿಹ ಗುಣ ಪರಮ|
ಸಹನೆ ಸಂತನ ಕೊಡುಗೆ- ಮುದ್ದುರಾಮ|
ಎಂಬ ಕವಿ ಕೆ. ಶಿವಪ್ಪನವರ ಮಾತಿನಂತೆ ನೋವನು ನುಂಗಿ ನಗುವ ಶ್ರೇಷ್ಠ ಗುಣವನ್ನು ರೂಢಿಸಿಕೊಳ್ಳಬೇಕು. ಬದುಕಿನ ಎಲ್ಲಾ ಕಷ್ಟನಷ್ಟಗಳನ್ನು ಸಹಿಸಿಕೊಳ್ಳುವ ಧೃತಿ ಅಂದರೆ ಧೈರ್ಯವನ್ನು ತಳೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ