ಪುತ್ತೂರು: ಅಡಕೆ ಬಗ್ಗೆ ರಾಜ್ಯ ಗೃಹ ಸಚಿವರ ಹೇಳಿಕೆಯನ್ನು ಖಂಡಿಸಿ ಸೋಮವಾರ ಅಮರ್ ಜವಾನ್ ಜ್ಯೋತಿ ಸಮೀಪ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ಕಿಸಾನ್ ಘಟಕ ಪ್ರತಿಭಟನೆ ನಡೆಸಿತು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಜಿಲ್ಲೆಯ ಆರ್ಥಿಕ ಅಭಿವೃದ್ಧಿಯಲ್ಲಿ ಅಡಕೆಯ ಪಾತ್ರ ಮಹತ್ವದ್ದು. ಅಡಕೆಗೆ ಭವಿಷ್ಯವಿಲ್ಲ ಎಂದು ಗೃಹ ಸಚಿವರ ನೀಡಿರುವ ಹೇಳಿಕೆಯು ಖಂಡನೀಯವಾಗಿದೆ. ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಡಕೆ ಮಾತ್ರವಲ್ಲ ಯಾವುದಕ್ಕೂ ಭವಿಷ್ಯವಿಲ್ಲ ಎಂದಾಗಿದೆ. ಅಡಕೆಗೆ ಬಂದಿರುವ ಹಳದಿ ರೋಗ, ಎಲೆಚುಕ್ಕಿ ರೋಗಕ್ಕೆ ಪರಿಹಾರ ಕಂಡುಕೊಳ್ಳುವ ಯಾವುದೇ ಪ್ರಯತ್ನವನ್ನು ಬಿಜೆಪಿ ಸರಕಾರ ಮಾಡಬೇಕಿದೆ. ಗೃಹ ಸಚಿವರ ಹೇಳಿಕೆಯನ್ನು ಖಂಡಿಸಿ, ಮುಂದೆ ಗ್ರಾಮ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೃಪಾ ಅಮರ್ ಆಳ್ವ ಮಾತನಾಡಿ, ದೇಶದ ಪ್ರಗತಿಯಲ್ಲಿ ಕೃಷಿಕರ ಪಾತ್ರ ಮಹತ್ತರವಾದದ್ದು. ಅಡಕೆ ಕುರಿತು ಇಲ್ಲದ ಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ರೈತರನ್ನು ತುಳಿಯುವ ಕೆಲಸ ಬಿಜೆಪಿ ಸರಕಾರದಿಂದ ನಡೆಯುತ್ತಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಮಾತನಾಡಿ, ಆಡಳಿತದಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಎಲ್ಲಾ ಅಡಕೆ ರೈತರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರಕಾರಕ್ಕೆ ಭವಿಷ್ಯವಿಲ್ಲದಂತೆ ಮಾಡುತ್ತಾರೆ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದಾಲಿ, ಜಿಲ್ಲಾ ವಕ್ತಾರ ಮುರಳೀಧರ ರೈ ಮಠಂತಬೆಟ್ಟು, ಉಪ್ಪಿನಂಗಡಿ – ವಿಟ್ಲ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ, ಜಿಲ್ಲಾ ಕಿಸಾನ್ ಘಟಕದ ಮುರಳೀಧರ ರೈ, ಕಾರ್ಯದರ್ಶಿ ವಿಕ್ರಂ ಸಾಂತ್ಯ, ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್, ಪಕ್ಷದ ಮುಖಂಡರಾದ ಧನಂಜಯ ಅಡ್ಪಂಗಾಯ, ಅಮಳ ರಾಮಚಂದ್ರ, ಪ್ರಸಾದ್ ಕೌಶಲ್ ಶೆಟ್ಟಿ, ಲ್ಯಾನ್ಸಿ ಮಸ್ಕರೇನಸ್, ಎ.ಕೆ. ಜಯರಾಮ ರೈ, ಕೃಷ್ಣಪ್ರಸಾದ್ ಆಳ್ವ, ಪ್ರವೀಣ್‌ಚಂದ್ರ ಆಳ್ವ, ವಿಜಯ ಕುಮಾರ್ ಸೊರಕೆ, ಸಾಹಿರಾ ಜುಬೇರ್, ಭರತ್ ಮುಂಡೋಡಿ, ಅಭಿಷೇಕ್, ಜೋಕಿಂ ಡಿಸೋಜಾ, ಮೌರಿಸ್ ಮಸ್ಕರೇನಸ್, ಶರೂನ್ ಸಿಕ್ವೇರಾ ಮೊದಲಾದವರು ಉಪಸ್ಥಿತರಿದ್ದರು.