ಪುತ್ತೂರು: ದಲಿತ ಕುಟುಂಬಕ್ಕೆ ತೆರಳುವ ರಸ್ತೆಯನ್ನು ಬಂದ್ ಮಾಡಿದ್ದು, ತಕ್ಷಣವೇ ದಾರಿ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪುತ್ತೂರು ತಾಲೂಕು ಆಡಳಿತ ಸೌಧ ಮುಂಬಾಗದಲ್ಲಿ ಧರಣಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಅಂಬೇಡ್ಕರ್ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪಿ. ಸುಂದರ್ ಪಾಟಾಜೆ, ಕೆಮ್ಮಿಂಜೆ ಗ್ರಾಮದ ಕುದ್ಕೋಳಿ ಎಂಬಲ್ಲಿ ನಾಲ್ಕು ದಲಿತ ಕುಟುಂಬಗಳ ಮನೆಗೆ ತೆರಳುವ ರಸ್ತೆಯನ್ನು ಖಾಸಗಿ ವ್ಯಕ್ತಿಯೋರ್ವರು ಬಂದ್ ಮಾಡಿದ್ದಾರೆ. ಅವರು ಈ ಪ್ರದೇಶದಲ್ಲಿನ ೪ ದಲಿತ ಕುಟುಂಬಗಳ ಮನೆಗೆ ಸಾಗುವ ಸರ್ಕಾರಿ ಜಾಗದಲ್ಲಿದ್ದ ದಾರಿಯನ್ನು ಸ್ಥಳೀಯರಾದ ಜಯಲತಾ ರೈ ಎಂಬವರು ಬಂದ್ ಮಾಡಿದ್ದಾರೆ. ಅಲ್ಲದೆ ಇಲ್ಲಿ ದಲಿತರು ನೆಟ್ಟಿರುವಂತಹ ಸುಮಾರು ೨೫ ಅಡಿಕೆ ಗಿಡಗಳನ್ನು ಕಡಿದು ನಾಶ ಪಡಿಸಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ರಸ್ತೆಯು ಸುಮಾರು ೪೦ ವರ್ಷಗಳಿಂದ ದಲಿತ ಕುಟುಂಬಗಳವರು ಮನೆಗೆ ಹೋಗಲು ಬಳಸುತ್ತಿದ್ದರು. ಇತ್ತೀಚೆಗೆ ಇಲ್ಲಿನ ಸರ್ಕಾರಿ ಜಾಗವನ್ನು ಅಕ್ರಮ ಸಕ್ರಮ ಯೋಜನೆಯಡಿ ತನಗೆ ಮಂಜೂರಾತಿ ಮಾಡಿಕೊಂಡಿರುವ ಜಯಲತಾ ರೈ ಅವರು ದಾರಿಯನ್ನು ಮುಚ್ಚಿ ಅನ್ಯಾಯ ಎಸಗಿದ್ದಾರೆ. ತಹಸೀಲ್ದಾರ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವ ತನಕ ನಾವು ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ದಲಿ ಪ್ರತಿಭಟನಾಕಾರರ ಮನವಿಯಂತೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅವರು ಪರಿಶೀಲನೆ ನಡೆಸಿದರು. ದಾರಿಯ ಬಗ್ಗೆ ಜಾಗದ ಅಳತೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತಹಸೀಲ್ದಾರರು ನೀಡಿದ ಭರವಸೆಯ ಹಿನ್ನಲೆಯಲ್ಲಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪರಮೇಶ್ವರ, ಮುಖಂಡರಾದ ಶೀನಪ್ಪ, ಕೃಷ್ಣಪ್ಪ, ಸೇಸಪ್ಪ, ತನಿಯಪ್ಪ, ರಾಮ, ಅನುರಾದ, ಲಲಿತ, ಸುನಂದ, ರತ್ನ ಮೊದಲಾದವರು ಉಪಸ್ಥಿತರಿದ್ದರು.