ತಲೆಗೆ ಗಾಯ, ಕಾಲು, ಬೆನ್ನುಮೂಳೆ ಮುರಿತ
ಮುಂಬಯಿ : ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಸ್ಥಿತಿಯ ಬಗ್ಗೆ ಊಹಾಪೋಹಗಳು ಹರಿದಾಡುತ್ತಿರುವಂತೆಯೇ ಪಂತ್ ಆರೋಗ್ಯ ಕುರಿತು ಬಿಸಿಸಿಐ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ರಿಷಬ್ ಪಂತ್ ಉತ್ತರಖಂಡದ ರೂರ್ಕಿ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಸದ್ಯ ಪಂತ್ ಆರೋಗ್ಯ ಸ್ಥಿರವಾಗಿದೆ. ಗಾಯದ ಪ್ರಮಾಣ ಹೆಚ್ಚಿದೆ. ಇದೀಗ ರಿಷಬ್ ಪಂತ್ ಅವರನ್ನು ಡೆಹ್ರಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪಂತ್ ಕುಟುಂಬದ ಜತೆ ಬಿಸಿಸಿಐ ನಿರಂತರ ಸಂಪರ್ಕದಲ್ಲಿದೆ. ಪಂತ್‌ಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಲು ಬಿಸಿಸಿಐ ಎಲ್ಲಾ ಪ್ರಯತ್ನ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಅಪಘಾತದ ಬೆನ್ನಲ್ಲೇ ರಿಷಬ್ ಪಂತ್ ಅವರನ್ನು ಸಾಕ್ಷಮ್ ಆಸ್ಪ್ರತ್ರೆ ದಾಖಲಿಸಲಾಗಿತ್ತು. ರಿಷಬ್ ಪಂತ್ ತಲೆಗೆ ಎರಡು ಗಾಯಗಳಾಗಿವೆ. ಮೊಣಕಾಲು, ಕಾಲಿನ ಪಾದದ ಮೂಳೆ ಮುರಿತಕ್ಕೊಳಗಾಗಿದೆ. ಬೆನ್ನಿನ ಮೂಳೆಗೂ ಗಾಯವಾಗಿದೆ. ಇದರ ಜತೆಗೆ ಕೈ ಹಾಗೂ ಮಣಿಕಟ್ಟು ಮೂಳೆಗೂ ಗಾಯವಾಗಿದೆ. ಸದ್ಯ ಪಂತ್ ಆರೋಗ್ಯ ಸ್ಥಿರವಾಗಿದೆ ಎಂದು ಬಿಸಿಸಿಐ ಹೇಳಿದೆ.
ಸಾಕ್ಷಮ್ ಆಸ್ಪತ್ರೆಯಿಂದ ಮ್ಯಾಕ್ಸ್ ಆಸ್ಪತ್ರೆಗೆ ಪಂತ್ ಅವರನ್ನು ಸ್ಥಳಾಂತರಿಸಲಾಗಿದೆ. ಇಲ್ಲಿ ಎಂಆರ್‌ಐ ಸ್ಕಾನ್ ಮಾಡಲಾಗುತ್ತದೆ. ಈ ಮೂಲಕ ಇತರ ಸಣ್ಣ ಪುಟ್ಟ ಗಾಯಗಳಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ರಿಷಬ್ ಕುಟುಂಬ ಹಾಗೂ ವೈದ್ಯಕೀಯ ತಂಡದ ಜತೆ ಬಿಸಿಸಿಐ ಸಂಪರ್ಕದಲ್ಲಿದೆ. ಪಂತ್‌ಗೆ ಅತ್ಯುತ್ತಮ ಚಿಕಿತ್ಸೆ ಬಿಸಿಸಿಐ ಒದಗಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ದಿಲ್ಲಿಯಿಂದ ಉತ್ತರಖಂಡಕ್ಕೆ ತೆರಳುತ್ತಿದ್ದಾಗ ರಿಷಬ್ ಪಂತ್ ಮರ್ಸಿಡೀಸ್ ಬೆಂಜ್ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಅತಿ ವೇಗದಿಂದ ಚಲಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ಬೆನ್ನಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನ ಗಾಜು ಒಡೆದು ರಿಷಬ್ ಪಂತ್ ಅವರನ್ನು ಕಾರಿನಿಂದ ರಕ್ಷಿಸಲಾಗಿದೆ. ಬಳಿಕ ಪಂತ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀಲಂಕಾ ವಿರುದ್ದದ ಸರಣಿಯಿಂದ ಹೊರಗುಳಿದಿರುವ ರಿಷಬ್ ಪಂತ್, ಉತ್ತರಖಂಡ್ ಮನೆಗೆ ತೆರಳಿ ಬಳಿಕ ಬೆಂಗಳೂರಿಗೆ ಆಗಮಿಸಬೇಕಿತ್ತು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಪರೀಕ್ಷೆ ಒಳಗಾಗಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಅಪಘಾತ ಸಂಭವಿಸಿದೆ.