ಪುತ್ತೂರು: ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನ ಸಮಿತಿ ನೇತೃತ್ವದಲ್ಲಿ ಶ್ರೀ ಅರಸು ಮುಂಡ್ಯತ್ತಾಯ ದೈವದ ವರ್ಷಾವಧಿ ಪೂಜೆ, ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ನಾಗತಂಬಿಲ ಮತ್ತು ಗ್ರಾಮದೈವ ಹಾಗೂ ಪರಿವಾರ ದೈವಗಳ ಪಾಂಗಳಾಯಿ ನೇಮೋತ್ಸವ ಜ. 7ರಂದು ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ತಾರನಾಥ ರೈ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಮ್ಮಿಂಜೆ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ದೈವಸ್ಥಾನದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆಯಲಿದೆ. ದೈವಸ್ಥಾನದಲ್ಲಿ ಶ್ರೀ ಅರಸು ಮುಂಡ್ಯತ್ತಾಯ, ನಾಗದೇವರು ಪಕ್ಕದಲ್ಲೇ ನಾಗರಕ್ತೇಶ್ವರಿ, ಗುಳಿಗನ ಕಟ್ಟೆ, ಪಂಜುರ್ಲಿ, ಕಲ್ಲುರ್ಟಿ, ಪೊಟ್ಟನ್ ದೈವಗಳ ಸಾನಿಧ್ಯವಿದೆ. ಜ. 6ರಂದು ಸಂಜೆ 6ಕ್ಕೆ ದೇವತಾ ಪ್ರಾರ್ಥನೆ, ಆಚಾರ್ಯವರಣ ಮತ್ತು ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ. ಜ. 7ರಂದು ಬೆಳಿಗ್ಗೆ 7.30ಕ್ಕೆ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ನಾಗತಂಬಿಲ, ಸಾರ್ವಜನಿಕ ಆಶ್ಲೇಷ ಬಲಿ, ಪಂಚಾಮೃತ ಅಭಿಷೇಕ, ದೈವಗಳ ಸನ್ನಿಧಿಯಲ್ಲಿ ಕಲಶ ತಂಬಿಲ ಸೇವೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ಕ್ಕೆ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯಲಿದೆ ಎಂದು ವಿವರಿಸಿದರು.
ಜಾಗ ಖರೀದಿಗಾಗಿ ದೇಣಿಗೆ:
ಉಪಾಧ್ಯಕ್ಷ ಉಮಾಶಂಕರ್ ಪಾಂಗಳಾಯಿ ಮಾತನಾಡಿ, ಆರಂಭದಲ್ಲಿ ಕೇವಲ ಅರ್ಧ ಸೆಂಟ್ಸ್ ಜಾಗವಿತ್ತು. ಬಳಿಕ ದಾನಿಗಳ ನೆರವಿನಿಂದ 48 ಸೆಂಟ್ಸ್ ಜಾಗವನ್ನು ದೈವಸ್ಥಾನಕ್ಕೆ ಹೊಂದಿಸಲಾಯಿತು. ಇದೀಗ ಅನ್ನಪ್ರಸಾದ ನೀಡುವುದಕ್ಕಾಗಿ ಜಾಗದ ಅವಶ್ಯಕತೆಯಿದ್ದು, ಇದಕ್ಕಾಗಿ 30 ಸೆಂಟ್ಸ್ ಜಾಗ ಖರೀದಿ ಮಾಡುವ ಆಲೋಚನೆ ಇದೆ. ಇದರ ಸಲುವಾಗಿ ಚದರ ಅಡಿಗೆ 300 ರೂ.ನಂತೆ ದೇಣಿಗೆಯನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಪುರುಷೋತ್ತಮ, ಖಜಾಂಚಿ ಸರೋಜಿನಿ ಅಭಿಕಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸೂರಪ್ಪ ಗೌಡ, ಸುರೇಶ್ ಉಪಸ್ಥಿತರಿದ್ದರು.