2022 ಅಂತ್ಯವಾಗುತ್ತಿದೆ. 2023 ಕಾಲಿಡಲು ಕ್ಷಣಗಣನೆ ಶುರುವಾಗಿದೆ. ಕೊರೋನಾದ ಭಯವನ್ನು ಒಳಗೊಳಗೇ ಅದುಮಿಕೊಂಡು, ಕ್ಯಾಲೆಂಡರ್ ಬದಲಿಸಲು ಸಿದ್ಧರಾಗಿದ್ದೇವೆ. ಇದು ಸಂಭ್ರಮಿಸುವ ಸಮಯ ಅಲ್ಲದೇ ಇದ್ದರೂ, ವಿಶ್ವಾದ್ಯಂತ ಹೊಸ ವರ್ಷವನ್ನು ಅದ್ಧೂರಿಯಾಗಿಯೇ ಸ್ವಾಗತಿಸಲು ಸಜ್ಜಾಗಿದ್ದೇವೆ.
ವಿಶ್ವಾದ್ಯಂತ ಏನೇ ನಡೆಯಲಿ, ಭಾರತದ ಸ್ಥಿತಿಗತಿ ಮಾತ್ರ ಭಿನ್ನ. ಇಲ್ಲಿನ ಮಣ್ಣಿನ ಗುಣವೋ ಏನೋ, ಭಾರತದಲ್ಲಿ ಹೊಸ ವರ್ಷಾಚರಣೆಗೆ ತನ್ನದೇ ಆದ ಅರ್ಥವಿದೆ. ಹೊಸ ವರ್ಷ ಎಂದರೆ ಹೊಸತನ. ಮನುಷ್ಯರಿಗೆ ಪ್ರತಿದಿನವೂ ಹೊಸತನವೇ. ಆದರೆ ಪ್ರಕೃತಿಗೆ… ಮನುಷ್ಯನ ದಿನವೊಂದರಲ್ಲಿ ಆಗುವ ಬದಲಾವಣೆಗಳು, ಪ್ರಕೃತಿಯಲ್ಲಿ ವರ್ಷಕ್ಕೊಮ್ಮೆ ಸಂಭವಿಸುತ್ತವೆ. ಆ ಬದಲಾವಣೆಗಳು ಮುಗಿದು, ಮತ್ತೊಮ್ಮೆ ಹೊಸ ಬದಲಾವಣೆಗೆ ತೆರೆದುಕೊಳ್ಳುವ ದಿನವೇ ಹೊಸ ವರ್ಷ. ಅದು ಯುಗಾದಿ.
ಹಾಗಾದರೆ ನಮಗ್ಯಾಕೆ ಕ್ಯಾಲೆಂಡರ್ ಬದಲಾವಣೆಯ ದಿನ ಹೊಸ ವರ್ಷವಾಗಿದೆ? ಈ ಪ್ರಶ್ನೆ ಪ್ರತಿಯೊಬ್ಬರ ಮನಸ್ಸಲ್ಲೂ ಇದೆ. ಕ್ಯಾಲೆಂಡರ್ ಬದಲಾವಣೆ ನಮ್ಮೊಳಗೆ ಅಷ್ಟೊಂದು ಬದಲಾವಣೆಗೆ ನಾಂದಿ ಹಾಡಿದೆಯೇ? ಪಂಚಾಂಗವನ್ನು ಪೆಟ್ಟಿಗೆಯಲ್ಲಿಟ್ಟು, ಕ್ಯಾಲೆಂಡರ್ ನಮ್ಮನೆಯ ಅವಿಭಾಜ್ಯ ಅಂಗವಾಗಿದ್ದು ಹೇಗೆ?
ಕ್ಯಾಲೆಂಡರ್ ಹೊಸ ವರ್ಷ:
ಕ್ರಿಸ್ತ ಪೂರ್ವ 45ರ ಸಂದರ್ಭದಲ್ಲಿ ಜನವರಿ 1ನ್ನು ಹೊಸ ವರ್ಷವೆಂದು ಆಚರಿಸಲಾಯಿತು. ಅದಕ್ಕೆ ಮೊದಲು, ರೋಮನ್ ಕ್ಯಾಲೆಂಡರ್ ಪ್ರಕಾರ, ಹೊಸ ವರ್ಷ ಮಾರ್ಚ್ ತಿಂಗಳಲ್ಲಿ ಶುರುವಾಗುತ್ತಿತ್ತಂತೆ. ಆದರೆ ರೋಮನ್ ಸರ್ವಾಧಿಕಾರಿ ಜ್ಯೂಲಿಯಸ್ ಸೀಸರ್, ಕ್ಯಾಲೆಂಡರಿನಲ್ಲಿ ಬದಲಾವಣೆ ತಂದನು. ರೋಮನ್ ದೇವತೆ ಜಾನುಸ್‍ನ ಗೌರವಾರ್ಥ ಜನವರಿಯನ್ನು ಮೊದಲ ತಿಂಗಳಾಗಿ ಹೆಸರಿಸಲಾಯಿತು. ಆದ್ದರಿಂದ ಜನವರಿ 1 ಹೊಸವರ್ಷವಾಯಿತು. ಆದರೆ ಜ್ಯೂಲಿಯಸ್ ಸೀಸರ್‍ನ ಈ ಪರಿಕಲ್ಪನೆಯನ್ನು ಅನೇಕರು ಒಪ್ಪಿಕೊಂಡಿರಲಿಲ್ಲ. ಪೋಪ್ ಗ್ರೆಗೊರಿ ಈ ಕ್ಯಾಲೆಂಡರ್ ಅನ್ನು ಪ್ರಮಾಣೀಕರಿಸಿದ ನಂತರ ಜನವರಿ 1 ಹೊಸ ವರ್ಷವಾಯಿತು. ಎಂದು ಹೇಳಲಾಗುತ್ತಿದೆ.
ಭಾರತದಲ್ಲೇಕೆ ಪ್ರಸ್ತುತ?
ಸುದೀರ್ಘ ಬ್ರಿಟಿಷ್ ಆಳ್ವಿಕೆಯೇ ಭಾರತದಲ್ಲಿ ಕ್ಯಾಲೆಂಡರ್ ವರ್ಷ ಜಾರಿಗೆ ಕಾರಣ. ಇಂದೂ ಕೂಡ ನಮ್ಮ ಆಡಳಿತ, ಬ್ರಿಟಿಷ್ ವ್ಯವಸ್ಥೆಯನ್ನೇ ಆಶ್ರಯಿಸಿಕೊಂಡಿದೆ. ಆಡಳಿತದ ವರ್ಷಾರಂಭ, ರಜಾ ದಿನಗಳು, ಕೆಲಸ ಕಾರ್ಯಗಳಿಗೆ ಬ್ರಿಟಿಷ್ ವ್ಯವಸ್ಥೆಯನ್ನೇ ಅನುಕರಿಸಿ, ಗ್ರೆಗೋರಿ ಕ್ಯಾಲೆಂಡರಿನ ಹಿಂದಿದ್ದೇವೆ. ಯುಗಾದಿ, ಪಂಚಾಂಗ ಮುಖ್ಯವಾಹಿನಿಯಿಂದ ಬದಿಗೆ ಸರಿದಿದೆ.
ಪಂಚಾಂಗ:
ಪಂಚಾಂಗ ಎಂದರೆ ಪಕ್ಕನೆ ನೆನಪಾಗುವುದೇ ಫೌಂಡೇಷನ್. ಅಂದರೆ ನಮ್ಮ ದೇಶವನ್ನು, ಪ್ರಕೃತಿಯನ್ನು ಅರ್ಥೈಸಿಕೊಳ್ಳಲು ನಮ್ಮ ಮುಂದಿರುವ ಫೌಂಡೇಷನ್ ಎಂದರೆ ಅದು ಪಂಚಾಂಗ. ಪಂಚಾಂಗ ಎಂದರೆ – ಐದು (ಪಂಚ) ಅಂಗ. ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳೇ ಆ ಐದು ಅಂಗಗಳು. ಆದ್ದರಿಂದ ಭಾರತದ ಅಡಿಪಾಯವೇ `ಪಂಚಾಂಗ’ ಎಂದರೂ ತಪ್ಪಾಗದು. ಭಾರತದ ಧಾರ್ಮಿಕ ಆಚರಣೆಗಳಿಗೆ ಈ ಪಂಚಾಂಗವೇ ಮೂಲಾಧಾರ. ಕಾರಣ, ಅದರಲ್ಲಿ ನಮ್ಮ ಪ್ರಕೃತಿಗೆ ಹತ್ತಿರವಾದ ಸಮೀಕರಣ ಸಿಗುತ್ತದೆ. ಹಾಗಿದ್ದು, ರೋಮನ್ ಅಥವಾ ಗ್ರೆಗೋರಿ ಪಂಚಾಂಗ ನಮಗೇಕೆ ಪ್ರಸ್ತುತ ಎಂಬ ಪ್ರಶ್ನೆ ಸಹಜವಾಗಿಯೇ ನಮ್ಮೊಳಗೆ ಉದ್ಭವವಾಗುತ್ತದೆ.
ವ್ಯತ್ಯಾಸ ಏನು?
ಪಂಚಾಂಗದ ಪ್ರಕಾರ ಆರಂಭವಾಗುವ ಹೊಸ ವರ್ಷಕ್ಕೂ, ಕ್ಯಾಲೆಂಡರಿನ ಹೊಸ ವರ್ಷಕ್ಕೂ ವ್ಯತ್ಯಾಸ ಏನು ಎಂದು ತಿಳಿದುಕೊಳ್ಳೋಣ. ಡಿಸೆಂಬರ್ 31ರ ಮಧ್ಯರಾತ್ರಿ 12 ಗಂಟೆಯ ನಂತರ ಹೊಸ ವರ್ಷ. ಇದು ಬಿಟ್ಟರೆ ಆಡಳಿತಕ್ಕಾಗಿ ಕ್ಯಾಲೆಂಡರನ್ನು ಅನುಕರಿಸುತ್ತಿದ್ದೇವಷ್ಟೇ. ಆದರೆ ಯುಗಾದಿಯಂದು ಸೂರ್ಯೋದಯದ ಶುಭ ಗಳಿಗೆಯಲ್ಲಿ ಹೊಸ ವರ್ಷ ಆರಂಭಗೊಳ್ಳುತ್ತದೆ. ಯುಗಾದಿ ದಿನಕ್ಕೆ ಇಡೀ ಪ್ರಕೃತಿಯೇ ಹೊಸ ಚಿಗುರಿನಿಂದ ಕಂಗೊಳಿಸುತ್ತದೆ. ಮಾತ್ರವಲ್ಲ, ನಮ್ಮ ಬದುಕಿಗೆ ಅರ್ಥವನ್ನು ನೀಡುವ ಬೇವು – ಬೆಲ್ಲ ಯುಗಾದಿಯ ಪ್ರತೀಕ. ಸಂಬಂಧಗಳನ್ನು ಈ ಯುಗಾದಿ ಇನ್ನಷ್ಟು ಬಲಗೊಳಿಸುತ್ತದೆ.
ಕೊನೆ ಮಾತು:
ಯುಗಾದಿ ನಮಗೆ ಹೊಸ ವರ್ಷ ಎನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮ ಕವಿಗಳು ಹಾಡಿ ಹೊಗಳಿರುವ ಸಾಲುಗಳು ಇದಕ್ಕೆ ಇನ್ನಷ್ಟು ಪುಷ್ಠಿ ನೀಡುತ್ತದೆ. “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷವ ಮರಳಿ ಮರಳಿ ತರುತಿದೆ…” ಎನ್ನುವ ಸಾಲಿನಂತೆ ಯುಗ ಯುಗ ಕಳೆದರೂ, ಯುಗಾದಿಯೇ ಹೊಸ ವರ್ಷ. ಸರ್ಕಾರ ತನ್ನ ಆಡಳಿತ ವ್ಯವಸ್ಥೆಯಲ್ಲಿ ಕ್ಯಾಲೆಂಡರ್ ಅನ್ನು ಬಿಟ್ಟು, ಪಂಚಾಂಗವನ್ನು ಅನುಸರಿಸಿದಾಗ, ಯುಗಾದಿ ಹೊಸ ವರ್ಷವಾಗಿ ಆಚರಣೆಗೆ ಬರುವುದರಲ್ಲಿ ಎರಡು ಮಾತಿಲ್ಲ.