ಪುತ್ತೂರು: ಇಂದು ಉನ್ನತ ಹುದ್ದೆಗಳಲ್ಲಿ ಇರುವವರೆಲ್ಲರೂ ಕನ್ನಡ ಮಾಧ್ಯಮದಿಂದಲೇ ಬಂದವರು. ಆದ್ದರಿಂದ ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಕಬಕ ಹಿ.ಪ್ರಾ. ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಸಂದರ್ಭ ಸ್ಮಾರ್ಟ್ ಕ್ಲಾಸ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ಕನ್ನಡ ಮಾಧ್ಯಮಗಳು ಈ ನಾಡಿಗೆ ನೀಡಿರುವ ಕೊಡುಗೆ ಅಗಣಿತ. ಇಷ್ಟು ಕೊಡುಗೆ ನೀಡಿರುವ ಕನ್ನಡ ಶಾಲೆಗಳ ಬಗ್ಗೆ ಇಂದು ಕೀಳರಿಮೆ ಹುಟ್ಟಿಕೊಂಡಿರುವುದು ಬೇಸರದ ಸಂಗತಿ. ಇಂತಹ ಕೀಳರಿಮೆಯನ್ನು ತೊಡೆದು ಹಾಕುವ ಉದ್ದೇಶದಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರತಿ ಸರಕಾರಿ ಶಾಲೆಗಳಿಗೆ ಹಾಗೂ ಅಂಗನವಾಡಿಗಳಿಗೆ ಮೂಲಸೌಕರ್ಯ ನೀಡುವ ಕೆಲಸವಾಗಿದೆ ಎಂದರು.
ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸ್ಮಾರ್ಟ್ ಕ್ಲಾಸ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ತರಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭ ಶಾಸಕ ಸಂಜೀವ ಮಠಂದೂರು ಅವರನ್ನು ಸನ್ಮಾನಿಸಲಾಯಿತು.
ಕಬಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ವಿನಯ್ ಕುಮಾರ್ ಕಲ್ಲೇಗ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ಶಾಬ ಕೆ., ಅಕ್ರಮ ಸಕ್ರಮ ಸಮಿತಿ ಸದಸ್ಯ ಪುರುಷೋತ್ತಮ ಮುಂಗ್ಲಿಮನೆ, ಎಸ್‍ಡಿಎಂಸಿ ಅಧ್ಯಕ್ಷೆ ವನಿತ, ಪ್ರಭಾರ ಮುಖ್ಯಗುರು ಲತಾ ಕುಮಾರಿ ಉಪಸ್ಥಿತರಿದ್ದರು.