ಪುತ್ತೂರು: ಭಾರತ್ ಜೋಡೋ ಯಾತ್ರೆಯನ್ನು ತಡೆಯುವ ಉದ್ದೇಶದಿಂದ ರಾಹುಲ್ ಗಾಂಧಿಯವರಿಗೆ ಕೇಂದ್ರ ಸರಕಾರ ಪತ್ರ ಬರೆಯುತ್ತದೆ. ಆದರೆ ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುವಾಗ ಇದಾವುದೇ ನಿಯಮಾವಳಿ ಅನ್ವಯವಾಗುವುದಿಲ್ಲವೇ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ಮುಂದುವರಿಯುತ್ತಿದ್ದಂತೆ ಕೇಂದ್ರ ಸಚಿವರಾದ ಮನ್ಸೂರ್ ಮಾಂಡವಿಯಾ ಅವರು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯುತ್ತಾರೆ. ನಿಮ್ಮ ಯಾತ್ರೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಲ್ಲ ಎಂದು ಆರೋಪಿಸುತ್ತಾರೆ. ಅಂದರೆ ಇದು ಯಾತ್ರೆಯನ್ನು ತಡೆಯುವ ಷಡ್ಯಂತ್ರವಾಗಿದೆ. ಪತ್ರ ಬರೆದ ಬೆನ್ನಿಗೇ ಕೋವಿಡ್ ಸ್ಫೋಟದ ವರದಿಗಳನ್ನು ಭಿತ್ತರಿಸಲಾಗುತ್ತಿದೆ. ಕೋವಿಡ್ ಬಗೆಗಿನ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ವಿಫಲವಾದ ಸರಕಾರ, ಸೌಹಾರ್ದತೆಯ ಭಾಗವಾಗಿ ರಾಹುಲ್ ಗಾಂಧಿ ನಡೆಸುತ್ತಿರುವ ಯಾತ್ರೆಯನ್ನು ಮೊಟುಕುಗೊಳಿಸಲು ಷಡ್ಯಂತ್ರ ರೂಪಿಸಿದೆ ಎಂದು ಆರೋಪಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಮಂಡ್ಯಕ್ಕೆ ಆಗಮಿಸಿದ್ದರು. ಆ ಕಾರ್ಯಕ್ರಮದಲ್ಲಿ ಅಮಿತ್ ಶಾ ಆದಿಯಾಗಿ ಯಾರೂ ಕೂಡ ಮಾಸ್ಕ್ ಧರಿಸಿಕೊಂಡಿರಲಿಲ್ಲ. ಶಾ ಅವರ ಕಾರ್ಯಕ್ರಮಕ್ಕಿರದ ನಿರ್ಬಂಧ ರಾಹುಲ್ ಗಾಂಧಿಗೇಕೆ? ಕೊರೋನಾ ಸೋಂಕು ಪರಿಚಯ ನೋಡಿಕೊಂಡು ಬರುತ್ತದೆಯೇ? ಹಾಗಾದರೆ ಮನ್ಸೂರ್ ಮಾಂಡವಿಯಾ ಬರೆದಿರುವ ಪತ್ರದ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ಅಡಿಕೆ ಧಾರಣೆಗೆ ಪೆಟ್ಟು!
ಅಡಕೆಯನ್ನು ಕೊಲ್ಲುವ ತಂತ್ರದ ಭಾಗವಾಗಿ ರಾಜ್ಯ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಅಡಿಕೆ ಹಾಗೂ ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕೆಂದರೆ ಸಾಲು ಸಾಲಾಗಿ ಬರುವ ಅಡಿಕೆ ಸಂಬಂಧಿತ ರೋಗಗಳಿಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ವಿದೇಶಗಳಿಂದ ಆಮದಾಗುತ್ತಿರುವ ಅಡಿಕೆಗೆ ನಿರ್ಬಂಧ ಹೇರಬೇಕಿತ್ತು. ಇದಾವುದನ್ನು ಮಾಡದೇ, ಬರೀಯ ಹೇಳಿಕೆ ನೀಡುವುದರಲ್ಲೇ ಬಿಜೆಪಿ ಸರಕಾರ ತಲ್ಲೀನವಾಗಿದೆ. ಇಂತಹ ಹೇಳಿಕೆಗಳಿಂದ ಅಡಿಕೆ ಧಾರಣೆ ಮೇಲೆ ಏಟು ಬೀಳುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಉಪಸ್ಥಿತರಿದ್ದರು.