ಲಿಂಗಾಯತ, ಒಕ್ಕಲಿಗರಿಗೆ ಹೊಸ ಕೆಟಗರಿ ಸೃಷ್ಟಿ
ಬೆಳಗಾವಿ: ಪಂಚಮಸಾಲಿ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಮತ್ತು ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ಮಹತ್ವದ ತೀರ್ಮಾನವನ್ನು ಸರಕಾರ ತೆಗೆದುಕೊಂಡಿದೆ.
ಲಿಂಗಾಯತ ಮತ್ತು ಒಕ್ಕಲಿಗರಿಗೆ ಹೊಸ ಕೆಟಗರಿ ಸೃಷ್ಟಿ ಮಾಡಿದ್ದು, 3ಎ ಯಲ್ಲಿದ್ದ ಒಕ್ಕಲಿಗರನ್ನು 2ಸಿಗೆ ಮತ್ತು 3 ಬಿ ಯಲ್ಲಿದ್ದ ಲಿಂಗಾಯತರಿಗೆ 2ಡಿ ಕೆಟಗರಿಯಲ್ಲಿ ಮೀಸಲಾತಿ ನೀಡಲಾಗಿದೆ. ಆದರೆ ಮೀಸಲಾತಿ ಪ್ರಮಾಣವನ್ನು ನಂತರ ನಿರ್ಧರಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
2ಎ ಮೀಸಲಾತಿ ಕೇಳಿದ್ದ ಪಂಚಮಸಾಲಿ ಸೇರಿದಂತೆ ವೀರಶೈವ ಲಿಂಗಾಯತರಿಗೆ 2ಡಿ ಕೆಟಗರಿಯಲ್ಲಿ ಮೀಸಲಾತಿ ನೀಡಲಾಗಿದೆ. 3ಎ ನಲ್ಲಿದ್ದ ಒಕ್ಕಲಿಗರಿಗೆ 2ಸಿ ಮೀಸಲಾತಿ ನೀಡಲಾಗಿದೆ. ಇದರಿಂದ 2ಎ ಮತ್ತು 2 ಬಿ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಕಳೆದ ವಾರ ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು, ಪಂಚಮಶಾಲಿ ಸಮುದಾಯವನ್ನು ಈಗಿರುವ 3ಬಿಯಿಂದ 2ಬಿಗೆ ಸೇರ್ಪಡೆ ಮಾಡುವ ಬದಲು ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದ್ದರು.