ಪುತ್ತೂರು: ವಿಷನ್ ಸಹಾಯ ನಿಧಿ ಸೇವಾ ಟ್ರಸ್ಟ್ ದಾನಿಗಳಿಂದ ಸಂಗ್ರಹಿಸಿದ ಹಣದಿಂದ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಆಯ್ದ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ಉಚಿತ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಡಿ. 30ರಂದು ಅನುರಾಗ ವಠಾರದಲ್ಲಿ ನಡೆಯಿತು.
ಆಹಾರ ಸಾಮಾಗ್ರಿ ವಿತರಿಸಿ ಮಾತನಾಡಿದ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶರತ್ ಕುಮಾರ್ ಮಾತನಾಡಿ, ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯಬೇಕು ಎಂದು ಹಿರಿಯರು ತಿಳಿಸಿಕೊಟ್ಟಿದ್ದಾರೆ. ಜನರ ಸೇವೆ ಮಾಡುವ ಮೂಲಕ ಒಳಿತು ಮಾಡು ಮನುಷ ಸಹಾಯ ಸೇವಾ ನಿಧಿ ಟ್ರಸ್ಟ್ ಇದೇ ಕಾರ್ಯವನ್ನು ಮಾಡುತ್ತಿದೆ. ಯಾವುದೇ ಸಂಘಟನೆಗಳ ಸಹಯೋಗ ಇಲ್ಲದೇ, ಸೇವೆ ಮಾಡುತ್ತಿದೆ. ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಶುಭಹಾರೈಸಿದರು.
ನಗರಸಭೆ ಮಾಜಿ ಅಧ್ಯಕ್ಷ ಲೊಕೇಶ್ ಹೆಗ್ಡೆ ಮಾತನಾಡಿ, ಬಲಗೈಯಲ್ಲಿ ಕೊಟ್ಟದ್ದು ಎಡಕೈಗೆ ಗೊತ್ತಾಗಬಾರದು ಎಂದು ಹೇಳುತ್ತಾರೆ. ಪ್ರಚಾರವಿಲ್ಲದೇ ಮಾಡುವ ಕಾರ್ಯಕ್ರಮಗಳಿಂದ ಸಮಾಜ ಕಲ್ಯಾಣ ಆಗಲು ಪೂರಕ. ಇಂತಹ ಕಾರ್ಯಕ್ರಮ ದೇವರು ಮೆಚ್ಚುವ ಕಾರ್ಯ ಎಂದರು.
ಟ್ರಸ್ಟ್ ಅಧ್ಯಕ್ಷೆ ಶೋಭಾ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ಜೆ.ಸಿ. ಚೇತನ್ ಕುಮಾರ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಮಮತಾ, ಹರ್ಷಿತ, ಮಾಲಿನಿ ಪ್ರಾರ್ಥಿಸಿದರು. ಒಳಿತು ಮಾಡು ಮನುಷ ಟ್ರಸ್ಟ್ ಸಂಚಾಲಕ ಕೃಷ್ಣಪ್ಪ ಕಲಾವಿದ ವರದಿ ವಾಚಿಸಿದರು. ವಸಂತಿ ಸ್ವಾಗತಿಸಿ, ಶ್ರೀತಿಕಾ ವಂದಿಸಿದರು. ಶ್ರೀಶುಭ ಕಾರ್ಯಕ್ರಮ ನಿರೂಪಿಸಿದರು.