ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ (100) ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಮೋದಿ ಅವರೇ ಟ್ವಿಟರ್‌ನಲ್ಲಿ ಈ ಮಾಹಿತಿಯನ್ನು ತಿಳಿಸಿದ್ದಾರೆ.
‘ಅಮ್ಮನಲ್ಲಿ ನಾನು ತ್ರಿಮೂರ್ತಿಗಳನ್ನು ಕಂಡಿದ್ದೇನೆ. ಅವರ ಜೀವನವು ತಪಸ್ವಿಯ ಪ್ರಯಾಣವಾಗಿತ್ತು. ನಿಷ್ಕಾಮ ಕರ್ಮಯೋಗಿಯ ಜೀವನ ಮತ್ತು ಮೌಲ್ಯಗಳಿಗೆ ಬದ್ಧವಾದ ಬದುಕಿನ ಸಂಕೇತವಾಗಿದ್ದರು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಹೀರಾಬೆನ್ ಅವರನ್ನು ಅಹಮದಾಬಾದ್‌ನ ಯು.ಎನ್.ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆ್ಯಂಡ್ ರೀಸರ್ಚ್ ಸೆಂಟರ್ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು.
‘ಶ್ರೀಮತಿ ಹೀರಾಬೆನ್ ಮೋದಿ ಅವರು 2022ರ ಡಿಸೆಂಬರ್ 30ರಂದು ಬೆಳಗಿನ ಜಾವ 3.39ಕ್ಕೆ ನಿಧನರಾಗಿದ್ದಾರೆ’ ಎಂದು ಆಸ್ಪತ್ರೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಅನಾರೋಗ್ಯದ ವಿಷಯ ತಿಳಿದು ದೆಹಲಿಯಿಂದ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಿದ್ದ ಮೋದಿ ಅವರು ಬುಧವಾರ ಮಧ್ಯಾಹ್ನವೇ ಆಸ್ಪತ್ರೆಗೆ ಭೇಟಿ ನೀಡಿ, ಸುಮಾರು ಒಂದೂವರೆ ಗಂಟೆ ಅಲ್ಲೇ ಇದ್ದರು. ಅಮ್ಮನ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೂ ಆಸ್ಪತ್ರೆಗೆ ಭೇಟಿ ಹೀರಾಬೆನ್ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದಿದ್ದರು.