ಪುತ್ತೂರು: ಭಜನೆ ಹಾಗೂ ಭಜಕರ ಬಗ್ಗೆ, ಹಿಂದೂ ದೇವರ ಬಗ್ಗೆ ನಿಂದನೆಯ ಪೋಸ್ಟ್ ಗಳನ್ನು ಫೇಸ್ ಬುಕ್ ಹಾಗೂ ವಾಟ್ಸ್ ಆ್ಯಪ್ ಗಳಲ್ಲಿ ಹರಿಬಿಟ್ಟು ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಉಪವಲಯ ಅರಣ್ಯ ಅಧಿಕಾರ ಸಂಜೀವ ಪೂಜಾರಿ ಕಾಣಿಯೂರ್ ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಆಗ್ರಹಿಸಿ ಪುತ್ತೂರು ನಗರ ಪೊಲೀಸ್ ಠಾಣೆ, ಉಪ್ಪಿನಂಗಡಿ, ಬೆಳ್ಳಾರೆ, ಕಡಬ, ಬೆಳ್ತಂಗಡಿ, ಸುಳ್ಯ ಪೊಲೀಸ್ ಠಾಣೆಗಳಲ್ಲಿ ಗುರುವಾರ ವಿಶ್ವ ಹಿಂದು ಪರಿಷದ್ ಹಾಗೂ ಭಜರಂಗದಳ ಏಕಕಾಲದಲ್ಲಿ ಪ್ರತಿಭಟನೆ ನಡೆಸಿತು.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಸುರೇಶ್ ಪುತ್ತೂರಾಯ, ನಮ್ಮ ದೇಶದ ಬಹುಸಂಖ್ಯಾತ ಹಿಂದೂ ಧರ್ಮದ ಅವಿಬಾಜ್ಯ ಅಂಗ ಭಜನೆ. ಇದರ ಬಗ್ಗೆ ಅವಹೇಳನಕಾರಿಯಾಗಿ ಮತ್ತೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವಂತಹ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಅಗತ್ಯ ಬಿದ್ದರೆ ರಸ್ತೆಯಲ್ಲೂ ಭಜನೆ:
ಭಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಠಾಣೆಯ ಮುಂದೆ ಭಜನೆ ಮಾಡುತ್ತಿರುವ ಕಾರ್ಯಕರ್ತರು, ಅಧಿಕಾರಿ ಸಂಜೀವ ಪೂಜಾರಿ ಅವರನ್ನು ಅಮಾನತು ಮಾಡದಿದ್ದರೆ ರಸ್ತೆಗಿಳಿದು ಹೋರಾಟ ಮಾಡಲು ಸಿದ್ಧರಿದ್ದೇವೆ. ಹಿಂದೂ ಸಮಾಜ ಒಗ್ಗಟ್ಟಾಗಿ ಇರಲು ಭಜನೆ ಪೂರಕ. ಇಂತಹ ನಮ್ಮ ಹಿಂದೂ ಸಂಸ್ಕೃತಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಸರಕಾರಿ ಅಧಿಕಾರಿ ಸಂಜೀವ ಪೂಜಾರಿಯನ್ನು ತಕ್ಷಣ ಅಮಾನತು ಗೊಳಿಸಬೇಕೆಂದು ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ. ಎಸ್, ಹಿಂದೂ ಪರಿಷತ್ ಜಿಲ್ಲಾ ಪ್ರಚಾರ ಪ್ರಮುಖ್ ಶ್ರೀಧರ್ ತೆಂಕಿಲ, ಹಿಂದೂ ಮುಖಂಡ ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಕ್ ಜಯಂತ ಕುಂಜೂರ್ ಪಂಜ, ಹರೀಶ್ ದೋಲ್ಪಾಡಿ, ಅಜಿತ್ ಕೆಯ್ಯುರು, ಪ್ರವೀಣ್ ಕಲ್ಲೇಗ ಮೊದಲಾದವರು ಉಪಸ್ಥಿತರಿದ್ದರು.