ಸಂತ ಫಿಲೋಮಿನಾ ಕಾಲೇಜಿನಿಂದ ಕೆದಂಬಾಡಿ ಗ್ರಾಮ ದತ್ತು ಸ್ವೀಕಾರ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಹಾಗೂ ಕೆದಂಬಾಡಿ ಗ್ರಾಮ ಪಂಚಾಯತ್‌ ಇವುಗಳ ನಡುವೆ ಕೆದಂಬಾಡಿ ಗ್ರಾಮ ದತ್ತು ಸ್ವೀಕಾರದ ಒಡಂಬಡಿಕೆ ನಡೆಸಲಾಯಿತು.
ಕೆದಂಬಾಡಿ ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆದಂಬಾಡಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳು ಒಡಂಬಡಿಕೆಗೆ ಸಹಿ ಹಾಕಿದರು. ಸದರಿ ಒಡಂಬಡಿಕೆಯು 2027 ಡಿಸೆಂಬರ್‌ ತನಕ ಮಾನ್ಯವಾಗಿರುತ್ತದೆ. ಈ ಒಡಂಬಡಿಕೆಯನ್ನು ಕೆದಂಬಾಡಿ ಗ್ರಾಮದ ಸಾಮಾಜಿಕ ಉನ್ನತೀಕರಣ ಹಾಗೂ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ, ಪರಿಸರದ ಬಗ್ಗೆ ಕಾಳಜಿ ಹಾಗೂ ಸಾಮಾಜಿಕ ಸಮಸ್ಯೆಗಳ ಬಗೆಗಿನ ಅರಿವು ಮೂಡಿಸುವ ಸಲುವಾಗಿ ನಡೆಸಲಾಗಿದೆ.

ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆಂಟನಿ ಪ್ರಕಾಶ್‌ ಮೊಂತೆರೋ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಸಮಾಜದ ಜನರನ್ನು ಒಗ್ಗೂಡಿಸುವ ಪುಟ್ಟ ಪ್ರಯತ್ನ ನಡೆಸಿರುವುದು ಸಂತೋಷದ ವಿಚಾರ. ಕಾಲೇಜ್‌ ಹಾಗೂ ಪಂಚಾಯತ್‌ಗಳ ನಿಯಮಗಳ ಚೌಕಟ್ಟಿನಲ್ಲಿ ನಾವು ಜೊತೆಯಾಗಿ ಹತ್ತು ಹಲವು ಜನಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ. ಮುಂಬರುವ ದಿನಗಳಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ಹಾಗೂ ಇತರ 35 ಘಟಕಗಳು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಿವೆ. ಪ್ರಕೃತಿಯೊಂದಿಗೆ ಮಾನವನದ್ದು ಅವಿನಾಭಾವ ಸಂಬಂಧ. ಇತ್ತೀಚಿನ ದಿನಗಳಲ್ಲಿ ಮಾನವನು ಪ್ರಕೃತಿಯಿಂದ ದೂರವಾಗುತ್ತಿದ್ದಾನೆ. ನಾವು ಅನುಭವಿಸುತ್ತಿರು ಪ್ರಾಕೃತಿಕ ವೈಪರೀತ್ಯಗಳೇ ಇದಕ್ಕೆ ಸಾಕ್ಷಿ. ಪ್ರತಿಯೊಬ್ಬರಲ್ಲೂ ಪರಿಸರದ ಬಗೆಗಿನ ಕಾಳಜಿ ಅಗತ್ಯ. ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ, ಗ್ರಾಮೀಣ ಜೀವನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಾಗೂ ಗ್ರಾಮಸ್ಥರಲ್ಲಿ ಪ್ರಾಕೃತಿಕ ಸಂಪನ್ಮೂಲಗಳ ಬಗ್ಗೆ ಅರಿವು ಮೂಡಿಸಿ ಗ್ರಾಮೀಣಾಭಿವೃದ್ಧಿಯಲ್ಲಿ ಈ ಮೂಲಕ ಕೈಜೋಡಿಸಲು ಸಂತಸವಾಗಿದೆ ಎಂದು ತಿಳಿಸಿದರು.

ಕೆದಂಬಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ರತನ್‌ ರೈ ಕುಂಬ್ರ ಮಾತನಾಡಿ, ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕೆದಂಬಾಡಿ ಗ್ರಾಮ ಪಂಚಾಯತ್‌ ನಡುವೆ ಒಡಂಬಡಿಕೆ ನಡೆಸುತ್ತಿರುವುದು ಖುಷಿಯ ವಿಚಾರ. ಗ್ರಾಮೀಣ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಜ್ಞಾನವೃದ್ಧಿಗಾಗಿ ನಡೆಸುತ್ತಿರುವ ಈ ಒಡಂಬಡಿಕೆಯ ಪ್ರಕಾರ ಮುಂದಿನ ೫ ವರ್ಷಗಳ ಕಾಲ ಈ ಗ್ರಾಮದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಕಾಲೇಜಿನ ವಿವಿಧ ಘಟಕಗಳು ಭಾಗಿಯಾಗಲಿವೆ. ಈ ಒಡಂಬಡಿಕೆ ನಡೆಸುವಲ್ಲಿ ಶ್ರಮವಹಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದು ಹೇಳಿದರು.































 
 

ಕಾಲೀಜಿನ ಕ್ಯಾಂಪಸ್‌ ನಿರ್ದೇಶಕ ವಂ| ಸ್ಟ್ಯಾನಿ ಪಿಂಟೋ ಮಾತನಾಡಿ, ಮುಂಬರುವ ದಿನಗಳಲ್ಲಿ ಕಾಲೇಜು ಹಾಗೂ ಕೆದಂಬಾಡಿ ಗ್ರಾಮ ಪಂಚಾಯತ್‌ಗಳ ಸಹಯೋಹದೊಂದಿಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅಜಿತ್‌ ಜಿ.ಕೆ ಮಾತನಾಡಿ, ಒಡಂಬಡಿಕೆಯ ಮೂಲಕ ಕಾಲೇಜಿನ ವತಿಯಂದ ಕೆದಂಬಾಡಿ ಗ್ರಾಮದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ಮೂಡಿಬರಲಿ ಎಂದು ಹಾರೈಸಿ ಒಡಂಬಡಿಕೆ ನಡೆಸುವಲ್ಲಿ ಕಾರ್ಯನಿರ್ವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ವಿನಯಚಂದ್ರರವರು ಒಡಂಬಡಿಕೆಯ ಉದ್ದೇಶಗಳನ್ನು ತಿಳಿಸಿದರು. ವೇದಿಕೆಯಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕರಾದ ಡಾ| ಎ. ಪಿ. ರಾಧಾಕೃಷ್ಣ ಹಾಗೂ ಕೆದಂಬಾಡಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಭಾಸ್ಕರ ರೈ, ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಭಿಷೇಕ್‌ ಸುವರ್ಣ, ಕೆದಂಬಾಡಿ ಪಂಚಾಯತ್‌ ಕಾರ್ಯದರ್ಶಿ ಸುನಂದ ರೈ ಉಪಸ್ಥಿತರಿದ್ದರು.
ಕಾಲೇಜಿನ ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವಾಸುದೇವ ಸ್ವಾಗತಿಸಿ, ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾಧಿಕಾರಿ ಪುಷ್ಪಾ ಎನ್‌ ವಂದಿಸಿದರು. ಕಾಲೇಜಿನ ಯಕ್ಷ ಕಲಾಕೇಂದ್ರದ ಸಂಯೋಜಕ ಪ್ರಶಾಂತ್‌ ರೈ ಕಾರ್ಯಕ್ರಮ ನಿರೂಪಿಸಿದರು.

ಗ್ರಾಮ ದತ್ತು ಒಡಂಬಡಿಕೆ:
ಗ್ರಾಮೀಣ ಸಮುದಾಯಗಳ ಸಾಮಾಜಿಕ ಅಭಿವೃದ್ಧಿ, ಗ್ರಾಮಸ್ಥರಿಗೆ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಅರಿವು ಮೂಡಿಸುವುದು, ಪ್ರತಿಯೊಬ್ಬರಿಗೂ ಅವರವರ ಅರ್ಹತೆಯ ಆಧಾರದಲ್ಲಿ ಅವಕಾಶಗಳು ದೊರೆಯುವಂತೆ ಮಾಡಲು, ಗ್ರಾಮಸ್ಥರಲ್ಲಿ ಪ್ರಗತಿಪರ ಚಿಂತೆನೆಗಳನ್ನು ಹುಟ್ಟು ಹಾಕಲು, ಸಾವಯವ ಕೃಷಿಯ ಮಹತ್ವದ ಬಗ್ಗೆ ಅರಿವು ಮೂಡಿಸಲು, ಸಹಕಾರಿ ಮನೋಭಾವವನ್ನು ಹೆಚ್ಚಿಸುವ ಮೂಲಕ ಸಾಮಾಜಿಕ ಕಳಕಳಿಯನ್ನು ವೃದ್ಧಿಗೊಳಿಸಲು, ಮಹಿಳಾ ಅಬಲೀಕರಣ, ಯುವ ಸಬಲೀಕರಣ, ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ಗ್ರಾಮೀಣ ಅಭಿವೃದ್ಧಿಯಲ್ಲಿ ಸುತ್ತ ಮುತ್ತಲಿನ ಸಂಸ್ಥೆಗಳೊಂದಿಗೆ ಕೈಜೋಡಿಸುವುದು, ಗ್ರಾಮೀಣ ಅಭಿವೃದ್ಧಿಯ ಹೊಸ ಮಾದರಿಗಳನ್ನು ಅನ್ವೇಶಿಸುವುದು ಮುಂತಾದ ಸದುದ್ದೇಶಗಳಿಂದ ಈ ಒಡಂಬಡಿಕೆಯನ್ನು ನಡೆಸಲಾಗಿದೆ. ಗ್ರಾಮಸ್ಥರಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಸೇವೆಗಳ ಲಭ್ಯತೆಯ ಕುರಿತಾಗಿ ಅರಿವು ಮೂಡಿಸುವುದು, ಸರಕಾರದ ವಿವಿಧ ಯೋಜನೆಗಳು ಹಾಗೂ ಈ ಯೋಜನೆಗಳ ಫಲಾನುಭವಿಗಳ ಬಗ್ಗೆ ಮಾಹಿತಿ ನೀಡುವುದು, ಸಾಮಾಜಿಕ ಪಿಡುಗುಗಳ ಬಗ್ಗೆ ಅರಿವು ಮೂಡಿಸುವುದು, ದುಶ್ಚಟಗಳ ದುಶ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಯುಯವನತೆಯಲ್ಲಿ ದೈಹಿಕ ಕ್ಷಮತೆ ಕಾಪಾಡುವ ಮಾರ್ಗೋಪಾಯಗಳ ಬಗ್ಗೆ ಮಾಹಿತಿ ನೀಡುವುದು, ಮೈಕ್ರೋ ಫೈನಾನ್ಸ್‌ ಮುಂತಾದ ಹಣಕಾಸು ಸೇವೆಗಳ ಕುರಿತು ಅರಿವು ಮೂಡಿಸುವುದು, ನೀರಿನ ಸಮರ್ಪಕ ಬಳಕೆಯ ಬಗ್ಗೆ ಮಾಹಿತಿ ನೀಡುವುದು, ಆಧುನಿಕ ಕೃಷಿ ಪದ್ಧತಿಯ ಬಗ್ಗೆ ಅರಿವು ಮೂಡಿಸುವುದು, ಒಟ್ಟಿನಲ್ಲಿ ಕೆದಂಬಾಡಿ ಗ್ರಾಮವನ್ನು ಸುತ್ತಲಿನ ಗ್ರಾಮಗಳಿಗೆ ಮಾಹಿತಿ ಕೇಂದ್ರವನ್ನಾಗಿಸುವುದು ಮೊದಲಾದ ಉದ್ದೇಶಗಳನ್ನು ಈ ಒಡಂಬಡಿಕೆಯು ಒಳಗೊಂಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top