ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ
ಹೊಸದಿಲ್ಲಿ: ಮುಂದಿನ ತಿಂಗಳು ಭಾರತದಲ್ಲೂ ಕೊರೊನಾ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. ಚೀನಾ, ಜಪಾನ್ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ಉಲ್ಬಣಿಸಿದೆ. ಭಾರತದಲ್ಲೂ ಹೊಸ ಅಲೆ ಭೀತಿ ಸೃಷ್ಟಿಸಿದ್ದು, ಮುಂದಿನ 40 ದಿನಗಳು ಅತ್ಯಂತ ನಿರ್ಣಾಯಕವಾಗಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್ ಸಲಹಾ ಸಮಿತಿ ಸಭೆಯಲ್ಲಿ ಕೊರೊನಾ ನಾಲ್ಕನೇ ಅಲೆಯ ಬಗ್ಗೆ ಚರ್ಚಿಸಲಾಗಿದೆ. ಜನವರಿ ಮಧ್ಯದಲ್ಲಿ ಸೋಂಕಿನ ಸಂಖ್ಯೆ ತೀವ್ರ ಏರಿಕೆಗೆ ಸಾಕ್ಷಿಯಾಗಬಹುದು. ಆದರೆ, ಸೋಂಕು ಉತ್ತುಂಗಕ್ಕೇರಿದರೂ ಸಾವು ಮತ್ತು ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆ ತೀರಾ ಕಡಿಮೆ ಇರಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಈ ಹಿಂದೆ ಪೂರ್ವ ಏಷ್ಯಾ ದೇಶಗಳಲ್ಲಿ ಸೋಂಕು ಕಾಣಿಸಿಕೊಂಡ 30-35 ದಿನಗಳ ಬಳಿಕ ಭಾರತದಲ್ಲಿ ಹೊಸ ಕೋವಿಡ್-19 ಅಲೆ ಕಂಡು ಬಂದಿತು. ಇದೇ ಪ್ರವೃತ್ತಿ ಈಗಲೂ ಮುಂದುವರಿಯಲಿದೆ ಎಂದು ಸಚಿವಾಲಯ ಅಂದಾಜಿಸಿದೆ.