ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ, ಇಂಟರ್ಯಾಕ್ಟ್ ಕ್ಲಬ್ ರಾಮಕೃಷ್ಣ ಯುವ, ದ.ಕ. ಜಿಲ್ಲಾ ಪೊಲೀಸ್, ಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಸಂಚಾರ ಪೊಲೀಸ್ ಠಾಣೆ ಆಶ್ರಯದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಡಿ. 28ರಂದು ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾ ನಡೆಯಿತು.
ಕೊಂಬೆಟ್ಟಿನಿಂದ ಆರಂಭಗೊಂಡ ಜಾಗೃತಿ ಜಾಥಾ, ಗಾಂಧಿಕಟ್ಟೆಯಲ್ಲಿ ಸಮಾರೋಪಗೊಂಡಿತು.
ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್ ಮಾತನಾಡಿ, ಪೊಲೀಸರಿಂದಷ್ಟೇ ಅಪರಾಧ ತಡೆ ಸಾಧ್ಯ ಎಂದುಕೊಂಡರೆ ತಪ್ಪು. ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿದರೆ ಮಾತ್ರ, ಅಪರಾಧವನ್ನು ಸಮರ್ಥವಾಗಿ ತಡೆಯಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮೊದಲಾಗಿ ಅರಿವು ಮೂಡಿಸಬೇಕು. ಅವರು ಮನೆಮಂದಿಗೆ ಅರಿವನ್ನು ತಲುಪಿಸುತ್ತಾರೆ. ಆದ್ದರಿಂದ ಪೊಲೀಸರನ್ನು ಕಂಡರೆ ಭಯ ಬೇಡ, ಮಾಹಿತಿ ನೀಡಿ ಸ್ವಸ್ಥ ಸಮಾಜಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿಕೊಂಡರು.
ರೋಟರಿ ಕ್ಲಬ್ ವಲಯ 5ರ ಅಸಿಸ್ಟೆಂಟ್ ಗವರ್ನರ್ ಎ. ಜಗಜೀವನ್ ದಾಸ್ ರೈ ಮಾತನಾಡಿ, ಜನರು ಶಾಂತಿ, ನೆಮ್ಮದಿ ಮತ್ತು ಶಿಸ್ತು ಬದ್ಧವಾಗಿ ಜೀವನ ಸಾಗಿಸಿದಾಗ ಅಪರಾಧ ಆಗುವುದಿಲ್ಲ. ಕಾನೂನನ್ನು ಪಾಲನೆ ಮಾಡುವ ಕಡೆ ಸಾರ್ವಜನಿಕರು ಗಮನ ನೀಡಬೇಕು ಎಂದರು.
ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಶ್ರೀಕಾಂತ್ ರಾಥೋಡ್, ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ, ಪುತ್ತೂರು ರೋಟರಿ ವಲಯ ಸೇನಾನಿ ಡಾ| ಕೃಷ್ಣ ಕುಮಾರ್ ರೈ ಮಾಡಾವು, ಸಂಚಾರ ಪೊಲೀಸ್ ಠಾಣೆ ಎಸ್.ಐ. ಕುಟ್ಟಿ ಎಂ.ಕೆ, ರೋಟರಿ ಯುವದ ನಿಯೋಜಿತ ಅಧ್ಯಕ್ಷ ಪಶುಪತಿ ಶರ್ಮಾ, ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ಶ್ರೇಯಾ, ಕ್ಲಬ್‌ನ ಸಂಯೋಜಕ ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸುನಿತಾ ಉಪಸ್ಥಿತರಿದ್ದರು.
ರೋಟರಿ ಪುತ್ತೂರು ಯುವದ ಅಧ್ಯಕ್ಷೆ ರಾಜೇಶ್ವರಿ ಆಚಾರ್ಯ ಸ್ವಾಗತಿಸಿ, ಕಾರ್ಯದರ್ಶಿ ಅಶ್ವಿನಿಕೃಷ್ಣ ಮುಳಿಯ ವಂದಿಸಿದರು. ರೋಟರಿ ಯುವದ ಪೂರ್ವಾಧ್ಯಕ್ಷ ಮತ್ತು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.