ಡಿ.30ರಿಂದ ಮಕರ ವಿಳಕ್ಕು ಯಾತ್ರೆ ಶುರು
ಶಬರಿಮಲೆ: ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಂಡಲ ಪೂಜೆ ನಡೆಯಲಿದ್ದು, ವಾರ್ಷಿಕ ಸಂಪ್ರದಾಯದಂತೆ ಇನ್ನೆರಡು ದಿನ ದೇಗುಲಕ್ಕೆ ಬಾಗಿಲು ಹಾಕಲಾಗುತ್ತದೆ. ಡಿ. 30ರಂದು ದೇಗುಲದ ಬಾಗಿಲು ಮತ್ತೆ ತೆರೆಯಲಾಗುತ್ತದೆ. ಪಾರ್ಥಸಾರಥಿ ದೇಗುಲದಿಂದ ಚಿನ್ನದ ಆಭರಣಗಳನ್ನು ತರಲಾಗಿದ್ದು, ಅಯ್ಯಪ್ಪ ಸ್ವಾಮಿಗೆ ಇಂದು ಅಲಂಕಾರ ಮಾಡಲಾಗುತ್ತದೆ. ಅಪರಾಹ್ನ 12.30 ಗಂಟೆಯಿಂದ 1 ಗಂಟೆಯ ನಡುವೆ ಮಂಡಲ ಪೂಜೆ ನಡೆಯಲಿದೆ.
ಇಂದು ರಾತ್ರಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಬಾಗಿಲು ಹಾಕಲಾಗುತ್ತದೆ. ದೇವಾಲಯದ ಬಾಗಿಲು ಡಿ.30ರಂದು ಮಕರವಿಲ್ಲಕ್ಕು ಅವಧಿಗಾಗಿ ಮತ್ತೆ ತೆರೆಯಲಾಗುತ್ತದೆ. ಜನವರಿ 14ರ ಮಕರ ಸಂಕ್ರಾಂತಿಯವರೆಗೆ ಮತ್ತೆ ದೇವಾಲಯ ತೆರೆದಿರಲಿದೆ. ಮಕರ ಸಂಕ್ರಾಂತಿ ಯಾತ್ರೆ ಕೈಗೊಳ್ಳುವವರು ಈ ಅವಧಿಯಲ್ಲಿ ಸನ್ನಿಧಾನಕ್ಕೆ ಯಾತ್ರೆ ಕೈಗೊಳ್ಳಲಿದ್ದಾರೆ.
ಕಳೆದ 39 ದಿನಗಳಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದಿಂದಾಗಿ ಸಾಕಷ್ಟು ಜನರಿಗೆ ಶಬರಿಮಲೆ ಯಾತ್ರೆ ಕೈಗೊಳ್ಳಲು ಆಗಿರಲಿಲ್ಲ. ಆದರೆ, ಈ ವರ್ಷ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಯಾತ್ರೆ ಕೈಗೊಂಡಿದ್ದಾರೆ. 39 ದಿನಗಳಲ್ಲಿ ಒಟ್ಟು 225 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ವಿಶೇಷವೆಂದರೆ ಈ ಬಾರಿ ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಭೇಟಿ ನೀಡಿದ ಭಕ್ತರಲ್ಲಿ ಶೇಕಡ 20ರಷ್ಟು ಭಕ್ತರು ಮಕ್ಕಳು. ಕಳೆದ ಕೆಲವು ವರ್ಷ ಸಾಂಕ್ರಾಮಿಕ ಕಾರಣದಿಂದ ಮಕ್ಕಳಿಗೆ ಯಾತ್ರೆ ಕೈಗೊಳ್ಳಲು ನಿಯಮಗಳಿದ್ದವು. ಹೀಗಾಗಿ, ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಮಕ್ಕಳಿಗೆ ಪ್ರತ್ಯೇಕ ಕ್ಯೂ ವ್ಯವಸ್ಥೆ ಮಾಡಲಾಗಿದೆ.
ಭಕ್ತರಿಗೆ ಸುಸೂತ್ರವಾಗಿ ದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು 90 ಸಾವಿರಕ್ಕೆ ಮಿತಿಗೊಳಿಸಲಾಗಿದೆ.