ಕಗ್ಗದ ಸಂದೇಶ- ಪರಿಮಳ ಬೀರಿ ಬಾಡಿ ಹೋಗುವ ಹೂಮಾಲೆಯಂತೆ ಬದುಕು…

ನೋಡುನೋಡುತ ಲೋಕಸಹವಾಸ ಸಾಕಹುದು|
ಬಾಡುತಿಹ ಹೂಮಾಲೆ ಗೂಢವಿಹ ಕಜ್ಜಿ||
ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ|
ನೋಡಾಡು ಹಗುರದಿಂ– ಮಂಕುತಿಮ್ಮ||

ಈ ಸೃಷ್ಟಿಯನ್ನು ನೋಡುತ್ತ ನೋಡುತ್ತ ಇದರ ಸಹವಾಸ ನಮಗೆ ಸಾಕೋ ಸಾಕು ಎನಿಸುತ್ತದೆ. ನೋಡಲು ಸುಂದರವಾಗಿದ್ದರೂ ಸ್ವಲ್ಪ ಹೊತ್ತಿನಲ್ಲಿ ಬಾಡುವ ಹೂಮಾಲೆಯಂತೆ; ಚರ್ಮದೊಳಗೆ ರಹಸ್ಯವಾಗಿರುವ ಕಜ್ಜಿಯಂತೆ ಬದುಕು. ಮೇಲ್ನೋಟಕ್ಕೆ ಸುಂದರವಾಗಿ ಕಂಡರೂ ಆಳವಾಗಿ ನೋಡಿದರೆ ಬೇಸರವುಂಟಾಗುತ್ತದೆ. ಆದ್ದರಿಂದ ಬಾಳಿನ ಆಳಕ್ಕೆ ಹೋಗದೆ ಮೇಲ್ಮೇಲೆ ಹಗುರವಾಗಿ ನೋಡುತ್ತ ಓಡಾಡು ಎಂದು ಮಾನ್ಯ ಡಿವಿಜಿಯವರು ಬದುಕಿನ ರಹಸ್ಯವನ್ನು ಈ ಮುಕ್ತಕದಲ್ಲಿ ತಿಳಿಸಿದ್ದಾರೆ.
ಮೇಲ್ಮೇಲೆ ನೋಡುವಾಗ ಜೀವನ ಬಹಳ ಸುಂದರವಾಗಿ ಕಾಣುತ್ತದೆ. ಆದರೆ ಬದುಕಿನ ಆಳಕ್ಕೆ ಇಳಿದಾಲೇ ಅರಿವಾಗುವುದು ನಾನಾ ರೀತಿಯ ಜಂಜಾಟಗಳು. ಹೂವಿನ ಮಾಲೆ ಆರಂಭದಲ್ಲಿ ಸುಂದರ ಹಾಗೂ ಸುಮಧುರ ಆದರೆ ಸ್ವಲ್ಪ ಸಮಯ ಮಾತ್ರ. ನಂತರ ಬಾಡಿ ಕೊಳಚೆಯಾಗುತ್ತದೆ‌‌. ಆದ್ದರಿಂದ ನಾವು ಜೀವನದ ಪ್ರತಿಕ್ಷಣವನ್ನು ಆನಂದಿಸುತ್ತಾ ಆಸ್ವಾದಿಸುತ್ತಾ ಹೋಗುಬೇಕು. ಆಳವಾಗಿ ಯೋಚಿಸಿ ಚಿಂತಿಸುವುದನ್ಬು ಬಿಟ್ಟು ಆಹ್ಲಾದತೆಯಿಂದ ನಗುನಗುತ್ತಾ ಬಾಳಬೇಕು.
ಮೇದಿನಿಯೊಳೆಲ್ಲವನು ವುದ್ಧಿಯಿಂದರಿಯುವುದು|
ಸಾಧುವೆನಬೇಡ ಸಾಧ್ಯವೆನಬೇಡ||
ಸಾಧಕನ ಸಿದ್ಧಿಗಳ ವಿಷಯದಲಿ ವೈಜ್ಞಾನ|
ಶೋಧನೆ ನಿರರ್ಥಕವು-ಬೋಳುಬಸ||

ಎಂಬ ಕವಿ ನಿಜಗುಣರ ನುಡಿಯಂತೆ ಆಳದ ಸಂಶೋಧನೆ ನಿರರ್ಥಕ. ಪರಬೊಮ್ಮನಾಡುವ ಈ ಲೋಕ ನಾಟಕದಿ ನಮ್ಮ ಪಾತ್ರವರಿತು ಹದದಿಂದ ಹಗುರವಾಗಿ ಬಾಳಬೇಕು. ಆಳವಾಗಿ ಶೋಧನೆ ಮಾಡುವುದನ್ನು ಬಿಟ್ಟು ಪರಿಶುದ್ಧ ಹಾಗೂ ಸಮಚಿತ್ತ ಮನದಿಂದ ಮುನ್ನಡೆಯಬೇಕು.
ಪರಿಶುದ್ಧ ಪಕ್ವತೆಯ ಬಾಳಿನನುಭವ ನಮಗೆ|
ಭಯ ಅಭಯ, ಶುಭ ಅಶುಭ ಒಂದೆ ಬಗೆ ಆಗ||
ಯಾವ ಕಾತರವಿಲ್ಲ ಪರಿಶುದ್ಧ ಮಾನಸದಿ|
ವಾಲು ನೀ ಹಗುರತೆಗೆ- ಮುದ್ದುರಾಮ||

ಎಂಬ ಕವಿ ಕೆ. ಶಿವಪ್ಪನವರ ಮಾತಿನಂತೆ ಜೀವನಾನುಭವದ ಪರಿಪಕ್ವತೆಯೊಂದಿಗೆ ಹಗುರತೆಗೆ ವಾಲಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕಸಾಪ ಕಾರ್ಕಳ ತಾಲೂಕು ಅಧ್ಯಕ್ಷರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top