ಪುತ್ತೂರು: ಕೆದಂಬಾಡಿ ಗ್ರಾಮವನ್ನು ದತ್ತು ಸ್ವೀಕರಿಸಿರುವ ಸಂತ ಫಿಲೋಮಿನಾ ಕಾಲೇಜಿನ ವತಿಯಿಂದ ಗ್ರಾಮದ ವಿವಿಧೆಡೆಗಳಲ್ಲಿ ರಸ್ತೆ ದುರಸ್ಥಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ನೇತೃತ್ವದಲ್ಲಿ ಕೆದಂಬಾಡಿ ಗ್ರಾಮ ಪಂಚಾಯತ್ ನ ಸಹಕಾರದೊಂದಿಗೆ ದತ್ತು ಸ್ವೀಕಾರದ ಬಳಿಕ ಪ್ರಥಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಮಾತನಾಡಿ, ಸ್ವಚ್ಛ ರಸ್ತೆ ಯಾವತ್ತೂ ಸುರಕ್ಷಿತ. ಈ ಹಿನ್ನೆಲೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ರಸ್ತೆ ದುರಸ್ಥಿ ಹಾಗೂ ಸ್ವಚ್ಛತೆಯ ಕಾರ್ಯದಲ್ಲಿ ಕೈಜೋಡಿಸಿರುವುದು ಸಂತೋಷದ ವಿಚಾರ ೆಂದರು.
ಸಾರೆಣಿಯಿಂದ ಸನ್ಯಾಸಿಗುಡ್ಡೆಯ ಸರಕಾರಿ ಶಾಲೆಯವರೆಗೆ ರಸ್ತೆ ಸ್ವಚ್ಛತೆ, ರಸ್ತೆ ದುರಸ್ತಿ ಮತ್ತು ರಸ್ತೆಯ ಇಕ್ಕೆಲಗಳಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು. ಇದಲ್ಲದೆ ರಸ್ತೆಯಲ್ಲಿರುವ ಹೊಂಡಗಳಿಗೆ ಮಣ್ಣು ಹಾಕಿ ದುರಸ್ತಿಗೊಳಿಸಲಾಯಿತು.
ಸನ್ಯಾಸಿಗಡ್ಡೆ ಶ್ರೀ ರಾಮ ಮಂದಿರದ ಅಧ್ಯಕ್ಷ ಜಯಶಂಕರ ರೈ ಬೆದ್ರುಮಾರು, ಸಂತೋಷ್ ರೈ ಕೊರಂಗ, ಕೆದಂಬಾಡಿ ಗ್ರಾಮಪಂಚಾಯ್ ಸದಸ್ಯರು, ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ವಾಸುದೇವ ಉಪಸ್ಥಿತರಿದ್ದರು.
ಕೆದಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿಅಧಿಕಾರಿ ಅಜಿತ್ ಕೆ. ಸ್ವಾಗತಿಸಿ, ಸುನಂದ ರೈ ವಂದಿಸಿದರು. ಕಾಲೇಜಿನ ೬೦ ಎನ್ ಎಸ್ ಎಸ್ ಸ್ವಯಂ ಸೇವಕರು ಮತ್ತು ಗ್ರಾಮ ನಿವಾಸಿಗಳು ಭಾಗವಹಿಸಿದರು.
ಭರತ ವೈಭವ ಸಾಂಸ್ಕೃತಿಕ ಕಾರ್ಯಕ್ರಮ
ಸಂತ ಫಿಲೋಮಿನಾ ಕಾಲೇಜಿನ ಯಕ್ಷಕಲಾ ಕೇಂದ್ರದ ವತಿಯಿಂದ ಕೆದಂಬಾಡಿ ಗ್ರಾಮದ ಶ್ರೀ ರಾಮ ಭಜನಾ ಮಂದಿರದಲ್ಲಿ “ಭರತ ವೈಭವ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶ್ರೀ ರಾಮ ಭಜನಾ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವದ ಸಂದರ್ಭ ಕಾಲೇಜಿನ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ವಿಶೇಷ ಕಾರ್ಯಕ್ರಮ ಪ್ರಶಂಸೆಗೆ ಪಾತ್ರವಾಯಿತು. ಭರತನಾಟ್ಯ, ವಿವಿಧ ಜಾನಪದ ನೃತ್ಯಗಳನ್ನು ಪ್ರದರ್ಶಿಸಲಾಯಿತು. ಭರತವೈಭವ ಕಾರ್ಯಕ್ರಮವನ್ನು ಕಾಲೇಜಿನ ಯಕ್ಷಕಲಾ ಕೇಂದ್ರದ ಸಂಯೋಜಕ ಪ್ರಶಾಂತ್ ರೈ ನಿರ್ದೇಶಿಸಿದ್ದರು.