ಪುತ್ತೂರು: ತೆಂಕಿಲ ಯುವ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ವಲಯದ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ ಡಿ. 26ರಂದು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಗೌಡ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಧ್ವಜಾರೋಹಣ ನೆರವೇರಿಸಿದರು. ಕ್ರೀಡಾ ಸಂಭ್ರಮವನ್ನು ಕೊಡಿಪ್ಪಾಡಿ ಊರ ಗೌಡರಾದ ಪಕ್ರು ಗೌಡ ನಂದನ ಉದ್ಘಾಟಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಮಾತನಾಡಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ, ಅವಕಾಶ ಮಾಡಿಕೊಟ್ಟಾಗ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ‍್ಯ. ಇಂತಹ ಕಾರ್ಯಗಳು ನಡೆದಾಗ ಸಮಾಜ ಗುರುತಿಸುವಂತೆ ಆಗುತ್ತದೆ. ಕ್ರೀಡೆಗೆ ಪ್ರಾಮುಖ್ಯತೆ ಕೊಟ್ಟು ಇಂತಹ ಕ್ರೀಡಾ ಸಂಭ್ರಮವನ್ನು ಆಯೋಜಿಸಿದಾಗ ಎಲ್ಲಾ ವಲಯದವರು ಪಾಲ್ಗೊಂಡು, ಸಮುದಾಯದಲ್ಲಿ ಒಗ್ಗಟ್ಟು ಮೂಡುತ್ತದೆ ಎಂದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಭಾರತದಲ್ಲಿ ಇಂದು ಶೇ. 60ರಷ್ಟು ಯುವಕರೇ ಇದ್ದಾರೆ. ಅದೇ ರೀತಿ ಗೌಡ ಸಮುದಾಯದಲ್ಲೂ ಯುವಕರ ಸಂಖ್ಯೆ ಹೆಚ್ಚಿದೆ. ನಮ್ಮ ಸಂಸ್ಕೃತಿ, ಪರಂಪರೆ, ಕೃಷಿಯನ್ನು ಯುವಕರು ಮುಂದುವರಿಸಿಕೊಂಡು ಹೋಗಬೇಕು. ಇಂದು ಕ್ರೀಡಾಕೂಟಗಳಲ್ಲೂ ಯುವಕ – ಯುವತಿಯರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಅಥ್ಲೆಟಿಕ್ಸ್ ನಲ್ಲಿ ತೆಂಕಿಲದ ಅನಿಲ್ ಅವರ ಮಗಳು, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಅವರ ಮಗಳು ಸರ್ಫಿಂಗಿನಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ಸಂಗತಿ. ಈ ರೀತಿಯಲ್ಲಿ ಕ್ರೀಡೆಯ ಮೂಲಕ ಸಮಾಜ, ಊರಿನ ಕೀರ್ತಿಯನ್ನು ಬೆಳಗಿಸುವಂತಾಗಬೇಕು ಎಂದರು.
ಕ್ರೀಡಾಕೂಟದ ಧ್ವಜಾರೋಹಣ ಮಾಡಿ ಮಾತನಾಡಿದ ದಕ್ಷಿಣ ಕನ್ನಡ ಗೌಡ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಶಿಕ್ಷಣ ಕ್ಷೇತ್ರದಲ್ಲಿ ಗೌಡ ಸಮಾಜ ಮುಂದೆ ಬರಬೇಕೆಂಬ ಉದ್ದೇಶದಿಂದ ದ.ಕ. ಜಿಲ್ಲಾ ಗೌಡ ವಿದ್ಯಾವರ್ಧಕ ಸಂಘ ಸ್ಥಾಪನೆ ಆಗಿದೆ. ಇದೀಗ 101ನೇ ವರ್ಷದಲ್ಲಿ ಸಂಘ ಇದೆ. ವಿದ್ಯಾ ಕ್ಷೇತ್ರಕ್ಕೆ ಸಂಘದ ಕೊಡುಗೆ ಅವಿಸ್ಮರಣೀಯ. ಇದರ ಜೊತೆಗೆ ಹಲವು ಕಾರ್ಯಕರ್ತರನ್ನು, ನಾಯಕರನ್ನು ಹುಟ್ಟು ಹಾಕುವ ಕೆಲಸವೂ ಆಗಿದೆ. ಇದೀಗ ಕ್ರೀಡಾಕೂಟಗಳ ಮೂಲಕ ಸಮಾಜದ ಶಕ್ತಿಯನ್ನು ಇನ್ನಷ್ಟು ಎತ್ತರಿಸುವ ಕೆಲಸ ಆಗಬೇಕಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಮೋಹನ ಗೌಡ ಇಡ್ಯಡ್ಕ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಮ್ ಏನೇಕಲ್, ಪಿಎಂಜಿಎಸ್‍ವೈ ಎಂಜಿನಿಯರ್ ಕೆ. ಜನಾರ್ದನ ಗೌಡ, ೊಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ನಗರ ಸಮಿತಿ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಕ್ರೀಡಾ ಸಂಯೋಜಕ ಮಾಧವ ಗೌಡ ಪೆರಿಯತ್ತೋಡಿ, ವಲಯ ಕಾರ್ಯದರ್ಶಿ ಆನಂದ ಗೌಡ ತೆಂಕಿಲ, ರಮೇಶ್ ಗೌಡ ಎಂ. ಮುಂಡತೋಡಿ ಅತಿಥಿಗಳಾಗಿದ್ದರು.
ಕೃಪಾ ಪ್ರಾರ್ಥಿಸಿ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ ಸ್ವಾಗತಿಸಿ, ಪುತ್ತೂರು ವಲಯ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ವಂದಿಸಿದರು. ಯುವ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಪೂವಪ್ಪ ದೇಂತಡ್ಕ ಕಾರ್ಯಕ್ರಮ ನಿರೂಪಿಸಿದರು.
ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವ್ಯಾಪ್ತಿಯ 7 ವಲಯಗಳಾದ ಪುತ್ತೂರು, ಕಡಬ, ಕುಂಬ್ರ, ಸವಣೂರು, ನೆಲ್ಯಾಡಿ, ಉಪ್ಪಿನಂಗಡಿ, ಆಲಂಕಾರು ವಲಯದ ಕ್ರೀಡಾಪಟುಗಳು ತಮ್ಮ ವಲಯದ ಧ್ವಜವನ್ನು ಹಿಡಿದು ಕ್ರೀಡಾಜ್ಯೋತಿಗೆ ಧ್ವಜವಂದನೆ ಸಲ್ಲಿಸಿದರು. ಬಳಿಕ ದೀಪ್ತಿ ಬಲ್ನಾಡು ಅವರು ಕ್ರೀಡಾ ಪ್ರತಿಜ್ಞೆ ಬೋಧಿಸಿದರು.
ಶಾಸಕರಿಗೆ ಸನ್ಮಾನ:
ಕ್ರೀಡಾಪಟುಗಳಿಗೆ ಜೆರ್ಸಿ ಪ್ರಾಯೋಜಕತ್ವ ಮಾಡಿದ ಒಕ್ಕಲಿಗ ಗೌಡ ಸೇವಾ ಸಂಘದ ಗೌರವ ಸಲಹೆಗಾರರಾದ ಶಾಸಕ ಸಂಜೀವ ಮಠಂದೂರು ಮತ್ತು ಕ್ರೀಡಾಕೂಟದ ಸಂಯೋಜಕರಾಗಿರುವ ದೈಹಿಕ ಶಿಕ್ಷಣ ಶಿಕ್ಷಕ ಮಾಧವ ಗೌಡ ಪೆರಿಯತ್ತೋಡಿ ಅವರನ್ನು ಸನ್ಮಾನಿಸಲಾಯಿತು.


ಕ್ರೀಡಾ ಜೆರ್ಸಿ ಬಿಡುಗಡೆ:
ಶಾಸಕ ಸಂಜೀವ ಮಠಂದೂರು ಹಾಗೂ ಪ್ರೇರಣಾ ಸಂಸ್ಥೆಯ ಪ್ರಾಯೋಜಕತ್ವದ ಕ್ರೀಡಾ ಜೆರ್ಸಿಗಳನ್ನು ಮತ್ತು ತೀರ್ಪುಗಾರರಿಗೆ ಜೆರ್ಸಿಯನ್ನು ಶಾಸಕ ಸಂಜೀವ ಮಠಂದೂರು ಬಿಡುಗಡೆಗೊಳಿಸಿದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಕ್ರೀಡಾಪಟುಗಳಿಗೆ ಜೆರ್ಸಿಗಳನ್ನು ಹಸ್ತಾಂತರಿಸಿದರು.
ಜಯಂತ್ಯೋತ್ಸವದ ಸ್ಟಿಕ್ಕರ್ ಅನಾವರಣ:
ಜನವರಿ 22ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯಲಿರುವ ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯೋತ್ಸವ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಮುದ್ರಣಗೊಂಡ ಸ್ಟಿಕ್ಕರ್ ಅನ್ನು ಇದೇ ಸಂದರ್ಭ ಅನಾವರಣಗೊಳಿಸಲಾಯಿತು.