ನವದೆಹಲಿ: ‘ಕೊರೊನಾ ವೈರಸ್‌ನ ಸೋಂಕು ಅನೇಕ ರಾಷ್ಟ್ರಗಳಲ್ಲಿ ಹರಡುತ್ತಿದೆ. ಹೀಗಾಗಿ ಜನರು ಕೋವಿಡ್–19ಗೆ ಸಂಬಂಧಿಸಿ ಹೆಚ್ಚು ಜಾಗರೂಕತೆ ವಹಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.
ಈ ವರ್ಷದ ಕೊನೆಯ ‘ಮನ್ ಕಿ ಬಾತ್’ನಲ್ಲಿ ಈ ವಿಷಯ ಕುರಿತು ಮಾತನಾಡಿದ ಅವರು, ‘ಕ್ರಿಸಮಸ್, ಹೊಸ ವರ್ಷಾಚರಣೆ ಅಥವಾ ರಜಾಕಾಲದ ಅಂಗವಾಗಿ ಸಾಕಷ್ಟು ಜನರು ಪ್ರವಾಸಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಕೈಗಳನ್ನು ತೊಳೆದುಕೊಳ್ಳುವುದು ಸೇರಿದಂತೆ ಕೋವಿಡ್‌ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕು’ ಎಂದರು.
ಸ್ಫೂರ್ತಿದಾಯಕ ವರ್ಷ
ಇನ್ನು ಕೆಲವೇ ದಿನಗಳಲ್ಲಿ ಕೊನೆಗೊಳ್ಳುತ್ತಿರುವ 2022, ಭಾರತದ ಪಾಲಿಗೆ ಅನೇಕ ವಿಷಯಗಳಲ್ಲಿ ಸ್ಫೂರ್ತಿದಾಯಕವಾಗಿತ್ತು ಎಂದು ಮೋದಿ ಹೇಳಿದರು.
‘ದೇಶವು ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. 220 ಕೋಟಿಗೂ ಅಧಿಕ ಡೋಸ್‌ಗಳಷ್ಟು ಕೋವಿಡ್ ಲಸಿಕೆ ನೀಡುವ ಮೂಲಕ, ಅಗಾಧ ಸಾಧನೆ ಮಾಡಿದೆ’ ಎಂದರು.
‘ರಫ್ತು ಕ್ಷೇತ್ರದಲ್ಲಿನ ಸಾಧನೆಯೂ ದೊಡ್ಡದು. 400 ಶತಕೋಟಿ ಡಾಲರ್ ಮೌಲ್ಯದಷ್ಟು ರಫ್ತು ವ್ಯವಹಾರ ಮಾಡಲಾಗಿದೆ. ಬಾಹ್ಯಾಕಾಶ, ರಕ್ಷಣೆ, ಡ್ರೋನ್ ಕ್ಷೇತ್ರಗಳಲ್ಲಿ ಸಹ ಭಾರತ ಅದ್ಭುತ ಸಾಧನೆ ಮಾಡಿದೆ’ ಎಂದರು.