ಮುನೀರ್ ಕಾಟಿಪಳ್ಳ ಆರೋಪ
ಮಂಗಳೂರು : ಎಂಆರ್‌ಪಿಎಲ್ ಸಂಸ್ಥೆ ಸ್ಥಳೀಯರನ್ನು ಸಂಪೂರ್ಣ ಕಡೆಗಣಿಸಿ 96 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಮೂಲಕ ಸರೋಜಿನಿ ಮಹಿಷಿ ವರದಿಯ ಆಶಯಗಳನ್ನು ಕಂಪನಿ ಮತ್ತೊಮ್ಮೆ ಗಾಳಿಗೆತೂರಿ ಕನ್ನಡಿಗರನ್ನು ದೂರವಿಟ್ಟಿದೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
2019-20 ರಲ್ಲಿ ನಡೆದ 234 ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಒದಗಿಸದೆ ಪೂರ್ಣವಾಗಿ ಹೊರಗಿಟ್ಟ ವೇಳೆ ದೊಡ್ಡ ಹೋರಾಟ ನಡೆದಿತ್ತು. ಆ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್ ಎಂಆರ್ ಪಿಎಲ್ ನ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ನಡೆದಿದ್ದ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿ ಸ್ಥಳೀಯರಿಗೆ ಆದ್ಯತೆ ಒದಗಿಸಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವುದಾಗಿ ಪ್ರಕಟಿಸಿದ್ದರು. ಮುಂದಿನ ಎಲ್ಲ ನೇಮಕಾತಿ ಪ್ರಕ್ರಿಯೆಯಲ್ಲಿ ಸರೋಜಿನಿ ಮಹಿಷಿ ಶಿಫಾರಸುಗಳನ್ನು ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ಘೋಷಿಸಿದ್ದರು ಎಂದು ಹೇಳಿದರು.
ಇನ್ನು ರಾಜ್ಯ ಸರಕಾರವೂ ಅದೇ ಭರವಸೆ ನೀಡಿತ್ತು. ಆದರೆ ಇದೀಗ ಮತ್ತೆ ಮಂಗಳೂರು ಮಾತ್ರವಲ್ಲದೆ ಕನ್ನಡಿಗರಿಗೂ ಅವಕಾಶ ನಿರಾಕರಣೆಯ ಸೂತ್ರ ಅಳವಡಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ತಕ್ಷಣ ರದ್ದುಗೊಳಿಸಿ ಸರೋಜಿನಿ ಮಹಿಷಿ ಶಿಫಾರಸುಗಳ ಆಧಾರದಲ್ಲಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಕಂಪನಿಯ ಮಾಲಿನ್ಯದ ನೇರ ಸಂತ್ರಸ್ತರಾದ ಸುತ್ತಮುತ್ತಲಿನ ಗ್ರಾಮದಲ್ಲಿ ಅರ್ಹತೆ ವಿದ್ಯಾಭ್ಯಾಸ ಹೊಂದಿರುವ ದೊಡ್ಡ ಸಂಖ್ಯೆಯ ಯುವಜನತೆಯಿದ್ದು, ಅಂಥವರಿಗೆ ಸೂಕ್ತ ತರಬೇತಿ ನೀಡಿ ಕಂಪನಿಯ ಉದ್ಯೋಗಗಳಿಗೆ ನೇಮಕಗೊಳ್ಳುವಂತೆ ವ್ಯವಸ್ಥೆ ಮಾಡಬೇಕು ಎಂದು ಬಲವಾಗಿ ಆಗ್ರಹಿಸುತ್ತಿದ್ದೇವೆ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ರಾಜ್ಯ ಸರಕಾರ 2016ರಲ್ಲಿ ಹೊರಡಿಸಿರುವ ಆರು ಅಂಶಗಳ ಪರಿಹಾರ ಕ್ರಮಗಳಲ್ಲಿ 27 ಎಕರೆ ಪ್ರದೇಶದಲ್ಲಿ ಹಸಿರು ವಲಯ ನಿರ್ಮಿಸಬೇಕೆಂಬ ಆದೇಶವನ್ನು ಪಾಲಿಸದ ಎಂಆರ್‌ಪಿಎಲ್ ಸಂಸ್ಥೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.